ಬೀದರ್: ಬರಗಾಲದಲ್ಲೂ ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿಯಾ ಬೆಳೆಗೆ ಕಿಡಿಗೇಡಿಗಳು ಕೀಟನಾಶಕ ಸಿಂಪಡಿಸಿ ನಾಶಪಡಿಸಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ.
ಮೂರು ಎಕರೆ ಜಮೀನಿನಲ್ಲಿ ಉತ್ತಮ ಫಸಲು ಬೆಳೆದಿದ್ದ ರೈತ ಹನುಮಂತರಾವ್ ರೇವಪ್ಪ ಇದೀಗ ಬೆಳೆ ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.
ದುಬಲಗುಂಡಿ ಗ್ರಾಮದ ಸರ್ವೆ ನಂಬರ್ 27ರಲ್ಲಿರುವ ಸುಶೀಲಾಬಾಯಿ ಎಂಬುವರಿಗೆ ಸೇರಿದ ಜಮೀನನ್ನು ಹನುಮಂತರಾವ್ ಅವರು ಲೀಸ್‌ಗೆ ಪಡೆದುಕೊಂಡಿದ್ದರು. ಬರಗಾಲದ ನಡುವೆಯೂ ನೀರು ಪೂರೈಸಿ ಸಾಕಷ್ಟು ಶ್ರಮವಹಿಸಿ ಚಿಯಾ ಬೆಳೆ ಬೆಳೆದಿದ್ದರು. ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತನಿಗೆ ಕಿಡಿಗೇಡಿಗಳ ಕೃತ್ಯ ದೊಡ್ಡ ಆಘಾತ ನೀಡಿದೆ.
ಕಿಡಿಗೇಡಿಗಳು ರಾತ್ರಿ ವೇಳೆ ಜಮೀನಿಗೆ ಬಂದು ಬೆಳೆಗೆ ವಿಷಕಾರಿ ಕೀಟನಾಶಕ ಸಿಂಪಡಿಸಿದ್ದಾರೆ. ಇದರಿಂದ ಮೂರು ಎಕರೆ ಪ್ರದೇಶದಲ್ಲಿದ್ದ ಚಿಯಾ ಕಾಳು ಬೆಳೆ ಒಣಗಿ ನಾಶವಾಗಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಣೆದುರೇ ಹಾಳಾಗಿರುವುದನ್ನು ಕಂಡು ರೈತ ಕಣ್ಣೀರಿಟ್ಟಿದ್ದಾರೆ.
Laxmi News 24×7