Breaking News

ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ಪಂಜಾಬ್ ಅನ್ನು ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ? – ರಾಹುಲ್‌ ವಾಗ್ದಾಳಿ

Spread the love

ಚಂಡೀಗಢ: ಬೆಳಗ್ಗೆಯ ಮದ್ಯದ ಅಮಲಿನಲ್ಲಿರುವ ಪಂಜಾಬ್‌ ಮುಖ್ಯಮಂತ್ರಿಯಿಂದ ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಪ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯವು ಮಾದಕದ್ರವ್ಯದ ಸಮಸ್ಯೆಯಿಂದ ತತ್ತರಿಸುತ್ತಿರುವಾಗ, ಮುಖ್ಯಮಂತ್ರಿ ಭಗವಂತ್ ಮಾನ್ ಸ್ವತಃ ಮದ್ಯಪಾನ ಮಾಡಿ ಪ್ರತಿ ಸಂಜೆಯೂ ಅದರ ಅಮಲಿನಲ್ಲಿರುತ್ತಾರೆ ಎಂದು ಅವರು ಆರೋಪ ಮಾಡಿದರು.

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ  ಸಂಗ್ರೂರ್‌ನಲ್ಲಿ ನಡೆದ ‘ಇನ್ಸಾಫ್ ರ್‍ಯಾಲಿ’ಯಲ್ಲಿ ಪ್ರಚಾರ ಭಾಷಣ ಮಾಡಿದ ರಾಹುಲ್‌ ಈ ಹಿಂದೆ ಮಾನ್ ಅವರೊಂದಿಗೆ ಸಂಸದರಾಗಿದ್ದ ದಿನಗಳನ್ನು ನೆನಪಿಸಿಕೊಂಡರು. “ನಾನು ಅವರ ಜೊತೆ ಲೋಕಸಭೆಯಲ್ಲಿದ್ದೆ. ಅವರು ನಮ್ಮ ನಡುವೆಯೇ ಕುಳಿತು ಜೋಕ್‌ಗಳನ್ನು ಹೇಳುತ್ತಿದ್ದರು. ಬೆಳಿಗ್ಗೆ 11 ಗಂಟೆಯ ಹೊತ್ತಿಗೇ ಅವರ ಬಾಯಿಯಿಂದ ಮದ್ಯದ ವಾಸನೆ ಬರುತ್ತಿತ್ತು” ಎಂದು ಹೇಳಿದರು.

ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ ಅವರು, ಮದ್ಯ ಸೇವಿಸುವುದು ಅವರ ವೈಯಕ್ತಿಕ ವಿಚಾರ. ಅದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ, ಮಾದಕವ್ಯಸನದ ವಿರುದ್ಧ ಕಠಿಣ ಹೋರಾಟ ನಡೆಸಬೇಕಾದ ಅತ್ಯುನ್ನತ ಹುದ್ದೆಯಲ್ಲಿರುವ ಮುಖ್ಯಮಂತ್ರಿಯೊಬ್ಬರು ಪ್ರತಿದಿನ ಸಂಜೆ ಅಮಲಿನಲ್ಲಿದ್ದರೆ ಆ ಪಿಡುಗನ್ನು ನಿಯಂತ್ರಿಸಲು ಹೇಗೆ ಸಾಧ್ಯ? ಪಂಜಾಬ್‌ಗೆ ಜನರ ನೋವನ್ನು ಅರ್ಥಮಾಡಿಕೊಳ್ಳುವ ಹಾಗೂ ಡ್ರಗ್ಸ್ ವಿರುದ್ಧ ಪ್ರಾಮಾಣಿಕವಾಗಿ ಹೋರಾಡುವ ನಾಯಕನ ಅಗತ್ಯವಿದೆ ಎಂದರು.

ಮೂರು ವರ್ಷಗಳಲ್ಲಿ ಪಂಜಾಬ್ ಅನ್ನು ಡ್ರಗ್ಸ್‌ಮುಕ್ತ ಮಾಡುವುದಾಗಿ ಹೇಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಕಿಡಿಕಾರಿದ ರಾಹುಲ್, ಮೂರು ವರ್ಷಗಳ ಕಾಲಮಿತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಮುಂದಿನ ಮೂರು ವರ್ಷಗಳಿರಲಿ, ಇನ್ನೊಂದು ವರ್ಷವೂ ಈ ಸರ್ಕಾರ ಉಳಿಯುವುದಿಲ್ಲ. ಆಗ ಅಮಿತ್ ಶಾ ಗೃಹ ಸಚಿವರಾಗಿಯೇ ಇರುವುದಿಲ್ಲ ಎಂದು ಭವಿಷ್ಯ ನುಡಿದರು.

ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಸರ್ಕಾರವನ್ನು ದೆಹಲಿಯಿಂದ ನಡೆಸುವುದಿಲ್ಲ ಮತ್ತು ಮುಖ್ಯಮಂತ್ರಿಯೇ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ರಾಹುಲ್ ಭರವಸೆ ನೀಡಿದರು. ಪ್ರಸ್ತುತ ಪಂಜಾಬ್ ಸರ್ಕಾರದ ಚುಕ್ಕಾಣಿ ಅಮಿತ್ ಶಾ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ ಹಂಚಿಹೋಗಿದೆ ಎಂದು ಅವರು ವ್ಯಂಗ್ಯವಾಡಿದರು. ಇದೇ ವೇಳೆ, ರೈತರ ಹಿತಾಸಕ್ತಿ ಹಾಗೂ ಆರ್ಥಿಕತೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಆಪ್ ಪಕ್ಷವನ್ನು ಬಿಜೆಪಿಯ ‘ಬಿ-ಟೀಮ್’ ಎಂದು ಕರೆದರು. ಪಂಜಾಬ್‌ನಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸರ್ಕಾರದ ವಿವಿಧ ಇಲಾಖೆಗಳಿಂದ ಸಂಗ್ರಹವಾಗುವ ಅಕ್ರಮ ಹಣ ದೆಹಲಿಯ ಆಪ್ ವರಿಷ್ಠರಿಗೆ ತಲುಪುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಬದಲಾವಣೆಯ ನಿರೀಕ್ಷೆಯೊಂದಿಗೆ ಮತ ನೀಡಿದ ಜನತೆಗೆ ಆಪ್ ದ್ರೋಹ ಬಗೆದಿದೆ ಎಂದರು.

ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಕ್ಷೇತ್ರವಾದ ಸಂಗ್ರೂರ್‌ನಲ್ಲೇ ಈ ಬೃಹತ್ ಸಮಾವೇಶ ಸಂಘಟಿಸುವ ಮೂಲಕ, 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ರಣಕಹಳೆ ಮೊಳಗಿಸಿದೆ.

ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೀಳುಮಟ್ಟದ ರಾಜಕೀಯ ಎಂದು ಕರೆದಿದೆ. ದೆಹಲಿ ಆಪ್ ಅಧ್ಯಕ್ಷ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿ, “ರಾಹುಲ್ ಗಾಂಧಿ ವಿರುದ್ಧವೂ ಈ ಹಿಂದೆ ಡ್ರಗ್ಸ್ ಆರೋಪಗಳು ಬಂದಿದ್ದವು. ಆದರೆ ಇಂತಹ ಆಧಾರರಹಿತ ಮತ್ತು ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಹುಲ್ ಅವರಂತಹ ಹಿರಿಯ ನಾಯಕರಿಂದ ಇಂತಹ ಮಾತುಗಳು ಶೋಭಿಸುವುದಿಲ್ಲ” ಎಂದರು. ಅಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಪಂಜಾಬ್ ಅನ್ನು ಗುರಿಯಾಗಿಸಿಕೊಂಡಿವೆ ಎಂದು ಆಪ್ ಆರೋಪಿಸಿದೆ.


Spread the love

About Laxminews 24x7

Check Also

22 ವರ್ಷ ಹಳೆಯ NASA ಉಪಗ್ರಹ ಭೂಮಿಗೆ ವಾಪಸ್- ಬೆಂಗಳೂರಿನ ಮೇಲೂ ಬೀಳಲಿದೆಯೇ ಅವಶೇಷ?

Spread the love ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ