ನವದೆಹಲಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2026ನೇ ಸಾಲಿನ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) ಮೂಲಕ ನಡೆಯುವ ಪ್ರವೇಶಾತಿ ಪ್ರಕ್ರಿಯೆಯ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಈ ಮೂಲಕ ಕರ್ನಾಟಕದಲ್ಲಿ ಎಂಬಿಎ, ಎಂಸಿಎ, ಎಂ.ಇ. ಮತ್ತು ಎಂ.ಟೆಕ್ ಸೇರಿದಂತೆ ವಿವಿಧ ಸ್ನಾತಕೋತ್ತರ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ದೊರೆತಂತಾಗಿದೆ.
ಈ ಹಿಂದೆ ಪ್ರವೇಶಾತಿ ವೇಳಾಪಟ್ಟಿಗೆ ಸಂಬಂಧಿಸಿದ ನ್ಯಾಯಾಲಯದ ನಿರ್ದೇಶನಗಳಿಂದಾಗಿ ಪಿಜಿಸಿಇಟಿ ಪ್ರವೇಶ ಪ್ರಕ್ರಿಯೆ ಮುಂದುವರಿಸುವ ಕುರಿತು ಅನಿಶ್ಚಿತತೆ ಉಂಟಾಗಿತ್ತು. ಈ ಹಿನ್ನೆಲೆಂ ಕೆಇಎ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಕೆಇಎ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ವಕೀಲ ಸುಭಾಷ್ ಚಂದ್ರ ಸಾಗರ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಮೊದಲ ಸುತ್ತಿನ ಕೌನ್ಸೆಲಿಂಗ್ನಲ್ಲಿ ಯಾವುದೇ ಸೀಟು ಪಡೆಯಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿ ಅವಕಾಶ ದೊರೆಯಲಿದೆ. ಅಲ್ಲದೆ, ತಮ್ಮ ಅರ್ಹತೆ ಮತ್ತು ಆಯ್ಕೆಗಳ ಆಧಾರದ ಮೇಲೆ ಈಗಾಗಲೇ ಹಂಚಿಕೆಯಾದ ಸೀಟುಗಳನ್ನು ಉತ್ತಮಗೊಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೂ ಈ ಪ್ರಕ್ರಿಯೆ ಅನುಕೂಲವಾಗಲಿದೆ. ರಾಜ್ಯದ ವಿವಿಧ ಸ್ನಾತಕೋತ್ತರ ವೃತ್ತಿಪರ ಕೋರ್ಸ್ಗಳಲ್ಲಿ ಲಭ್ಯವಿರುವ ಸೀಟುಗಳ ಸಮರ್ಪಕ ಬಳಕೆಗೆ ಸಹ ಇದು ನೆರವಾಗಲಿದೆ.
ಎರಡನೇ ಸುತ್ತಿನ ಕೌನ್ಸೆಲಿಂಗ್ಗೆ ಸಂಬಂಧಿಸಿದ ವಿವರವಾದ ವೇಳಾಪಟ್ಟಿ ಹಾಗೂ ಅಭ್ಯರ್ಥಿಗಳು ಪಾಲಿಸಬೇಕಾದ ಮುಂದಿನ ಸೂಚನೆಗಳನ್ನು ಕೆಇಎ ತನ್ನ ಅಧಿಕೃತ ಜಾಲತಾಣದ ಮೂಲಕ ಪ್ರಕಟಿಸುವ ನಿರೀಕ್ಷೆಯಿದೆ.
Laxmi News 24×7