ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಜನತೆಗೆ ಬೆಲೆ ಏರಿಕೆ ಶಾಕ್ ಕೊಟ್ಟಿದೆ. ಪ್ರತಿ ಲೀಟರ್ ಹಾಲಿನ ದರ 8 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಪರಿಷ್ಕೃತ ದರ ನವೆಂಬರ್ 1 ರಿಂದಲೇ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ 10 ರೂ. ಏರಿಕೆ ಮಾಡುವಂತೆ ಒತ್ತಾಯ ಮಾಡಿದ್ದವು. ಸರ್ಕಾರ 8 ರೂ. ಏರಿಕೆ ಮಾಡಿದ್ದು, ಹೊಸ ದರ ನಂ.1 ರಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ತೀವ್ರ ಬರ ಇದೆ, 228 ತಾಲ್ಲೂಕುಗಳಲ್ಲಿ ಬರ ಘೋಷಣೆ ಆಗಿದೆ. ಕಬ್ಬಿನ ದರ ಸಾಲೋದಿಲ್ಲ ಅಂತನೂ ಹೋರಾಟ ನಡೀತಿದೆ. ಇದರ ಮಧ್ಯೆ ಹೈನುಗಾರಿಕೆ ಮಾಡ್ಕೊಂಡು ಹಲವು ರೈತರು ಬದುಕುತ್ತಿದ್ದಾರೆ. ಹಾಲು ಉತ್ಪಾದನೆ ಮಾಡಿ ಅದರ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ಕೃಷಿ ವಲಯದಲ್ಲಿ ನಿಶ್ಚಿತತೆ ಇಲ್ಲ, ಹಾಲು ಉತ್ಪಾದನೆಯ ಆದಾಯ ಸದ್ಯಕ್ಕೆ ಅವರಿಗೆ ಖಾತ್ರಿ ಎಂದು ಹೇಳಿದರು.
ಈ ಹಿಂದೆ ರೈತರು ಹೋರಾಟ ಮಾಡಿ ಹಾಲಿನ ದರ ಪರಿಷ್ಕರಣೆಗೆ ಒತ್ತಾಯ ಮಾಡಿದ್ರು. ಹಾಲು ಉತ್ಪಾದನಾ ಒಕ್ಕೂಟಗಳೂ ಹಾಲಿನ ದರ ಹೆಚ್ಚಿಸಲು ಒತ್ತಾಯ ಮಾಡಿದ್ದವು. ಅಷ್ಟೇ ಅಲ್ಲದೇ, ಹಾಲಿನ ದರ ಏರಿಸಲು ಪಕ್ಷಾತೀತವಾಗಿ ಒತ್ತಡ ಇದೆ. ರಾಜ್ಯದಲ್ಲಿ 46 ರೂ., ದೆಹಲಿಯಲ್ಲಿ 59 ರೂ., ಗುಜರಾತ್ನಲ್ಲಿ 57 ರೂ., ತೆಲಂಗಾಣ 64 ರೂ. ಇದೆ. ಸರಾಸರಿ ಭಾರತದಲ್ಲಿ 57 ರೂ ಹಾಲಿನ ದರ ಇದೆ. ನಮ್ಮ ರಾಜ್ಯದಲ್ಲಿ ಸರಾಸರಿ ದರ 46 ರೂ ಇದೆ ಎಂದು ವಿವರಿಸಿದರು.
ಈ ಎಲ್ಲ ಕಾರಣಗಳಿಂದ ರೈತರ ನೆರವಿಗಾಗಿ ಹಾಲಿನ ದರ ಏರಿಕೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಹಾಲಿನ ದರ 8 ರೂ. ಹೆಚ್ಚಳ ಮಾಡಬೇಕು ಅಂತ ತೀರ್ಮಾನ ಮಾಡಲಾಗಿದೆ. ಇದರಲ್ಲಿ 1 ರೂ. ಹಾಲು ಒಕ್ಕೂಟಗಳಿಗೆ, ರೈತರಿಗೆ 7 ರೂ. ಹೋಗಲಿದೆ. ಇದು ಸರ್ವಾನುಮತದಿಂದ ಕೈಗೊಂಡ ತೀರ್ಮಾನ ಆಗಿದೆ. ಇನ್ಮುಂದೆ ರೈತರಿಗೆ 35 ರೂ. ಬದಲು 42 ರೂ. ಲೀಟರ್ಗೆ ಸಿಗಲಿದೆ. ಇದರ ಜೊತೆಗೆ ಪ್ರೋತ್ಸಾಹ ಧನ 5 ರೂ. ಸಿಗ್ತಿದೆ. ಒಟ್ಟು 47 ರೂ. ಲೀಟರ್ ಹಾಲಿಗೆ ಇನ್ಮುಂದೆ ರೈತರಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.
ಹಾಲಿನ ದರಕ್ಕೆ ಪೂರಕವಾಗಿ ಮೊಸರು, ಬೆಣ್ಣೆ, ತುಪ್ಪ ಸೇರಿ ವಿವಿಧ ಹಾಲಿನ ಉತ್ಪನ್ನಗಳ ದರಗಳು ಹೆಚ್ಚಾಗಲಿವೆ. ದೆಹಲಿಗಿಂತ 6 ರೂ., ಗುಜರಾತ್ ಗಿಂತ 3 ರೂ., ಮಹಾರಾಷ್ಟ್ರ ಕ್ಕಿಂತ 5 ರೂ., ರಾಜಸ್ಥಾನಕ್ಕಿಂತ 2 ರೂ, ತೆಲಂಗಾಣಕ್ಕಿಂತ 10 ರೂ. ಕಡಿಮೆ ಇದೆ. ಕೇರಳಕ್ಕಿಂತ 2 ರೂ. ಕಡಿಮೆ ದರ ನಮ್ಮಲ್ಲಿ ಇರಲಿದೆ. ದರ ಪರಿಷ್ಕರಣೆ ನಂತರವೂ ಅಕ್ಕಪಕ್ಕದ ರಾಜ್ಯಗಳಿಗಿಂತಲೂ ನಮ್ಮಲ್ಲಿ ಹಾಲಿನ ದರ ಕಡಿಮೆ ಇರಲಿದೆ ಎಂದು ಕೃಷ್ಣಬೈರೇಗೌಡ ಅವರು ತಿಳಿಸಿದರು.
Laxmi News 24×7