Breaking News

25 ವರ್ಷಗಳಿಂದ ಹಿರಿಯರ ಬಾಳಿಗೆ ಆಸರೆಯಾದ ‘ಘರಕುಲ’: ಬೆಳ್ಳಿ ಹಬ್ಬದ ಸಂಭ್ರಮ: ಬೆನಕನಹಳ್ಳಿಯ ಆಶ್ರಮದಲ್ಲಿ ಕಾರ್ಯಕ್ರಮ

Spread the love

ಬೆಳಗಾವಿ: ವಯೋವೃದ್ಧರ ಬದುಕಿನ ಸಂಧ್ಯಾಕಾಲಕ್ಕೆ ಪ್ರೀತಿ, ಕಾಳಜಿ, ಸುರಕ್ಷತೆ ಹಾಗೂ ನೆಮ್ಮದಿಯ ಆಸರೆಯಾಗಿರುವ ಬೆಳಗಾವಿಯ ಸ್ವಾಮಿಛಾಯಾ ಪ್ರತಿಷ್ಠಾನ ಸಂಚಾಲಿತ ‘ಘರಕುಲ’ ವೃದ್ಧಾಶ್ರಮವು 25 ವರ್ಷಗಳ ಸೇವಾ ಪಯಣವನ್ನು ಪೂರೈಸಿದ್ದು, ನವೆಂಬರ್ 3ರಂದು ರಜತ ಮಹೋತ್ಸವ (ಬೆಳ್ಳಿ ಹಬ್ಬ) ಆಚರಿಸಿಕೊಳ್ಳಲಿದೆ.ಅಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಬೆನಕನಹಳ್ಳಿಯಲ್ಲಿರುವ ಆಶ್ರಮದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಅನಿಲ ಪೋತದಾರ ಹಾಗೂ ಪ್ರಮುಖರು ಈ ಕುರಿತು ಮಾಹಿತಿ ನೀಡಿದರು.
2001ರಲ್ಲಿ ಶ್ರೀ ಮುಕುಂದರಾವ್ ಪೋತದಾರ ಅವರ ಮನಸ್ಸಿನಲ್ಲಿ ಮೊಳಕೆಯೊಡೆದ ಸೇವಾ ಸಂಕಲ್ಪವೇ ‘ಘರಕುಲ’ ವೃದ್ಧಾಶ್ರಮದ ಸ್ಥಾಪನೆಗೆ ನಾಂದಿಯಾಯಿತು.
ತಿಲಕವಾಡಿಯ ಸಣ್ಣ ಬಾಡಿಗೆ ಮನೆಯಲ್ಲಿ ಕೇವಲ ಮೂವರು ಹಿರಿಯರೊಂದಿಗೆ ಆರಂಭವಾದ ಈ ಸೇವಾ ಕಾರ್ಯ, ಬಳಿಕ ಕ್ಯಾಂಪ್ ಪ್ರದೇಶಕ್ಕೆ ಸ್ಥಳಾಂತರಗೊಂಡು, ಇಂದು ಬೆನಕನಹಳ್ಳಿಯ ಪ್ರಶಾಂತ, ರಮಣೀಯ ಪರಿಸರದಲ್ಲಿರುವ ವಿಶಾಲ ಸ್ವಂತ ಕಟ್ಟಡದಲ್ಲಿ ಅನೇಕ ಹಿರಿಯರಿಗೆ ಆಶ್ರಯ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ.

ವೃದ್ಧಾಪ್ಯದಲ್ಲಿ ಹಿರಿಯರಿಗೆ ಕೇವಲ ವಸತಿಯಲ್ಲ, ಪ್ರೀತಿ, ಗೌರವ ಮತ್ತು ಆತ್ಮೀಯತೆಯೂ ಅಗತ್ಯ ಎಂಬ ಆಶಯದೊಂದಿಗೆ ಘರಕುಲ ಕಾರ್ಯನಿರ್ವಹಿಸುತ್ತಿದೆ. ಆವರಣ, ಕಾವಲು ಬೇಲಿ, ಭದ್ರತಾ ಗೇಟ್‌ಗಳು, ಹಸಿರು ಉದ್ಯಾನ, ವಾಯುವಿಹಾರಕ್ಕೆ ಪ್ರತ್ಯೇಕ ಮಾರ್ಗಗಳು, ಧ್ಯಾನಮಂದಿರ, ಟಿವಿ ಹಾಗೂ ಒಳಾಂಗಣ ಆಟಗಳ ವ್ಯವಸ್ಥೆ ಇಲ್ಲಿನ ಪ್ರಮುಖ ಸೌಲಭ್ಯಗಳಾಗಿವೆ.
ಹಿರಿಯರ ಜ್ಞಾನಾರ್ಜನೆ ಮತ್ತು ಓದುವ ಹವ್ಯಾಸಕ್ಕೆ ಉತ್ತೇಜನ ನೀಡಲು ವಿವಿಧ ದಿನಪತ್ರಿಕೆಗಳು, ಮಾಸಿಕಗಳು ಹಾಗೂ ಉತ್ತಮ ಪುಸ್ತಕಗಳನ್ನು ಒಳಗೊಂಡ ವಾಚನಾಲಯವನ್ನೂ ರೂಪಿಸಲಾಗಿದೆ.

ನಿವಾಸಿಗಳ ಅನುಕೂಲಕ್ಕಾಗಿ ಒಬ್ಬರು ಅಥವಾ ಇಬ್ಬರು ವಾಸಿಸಬಹುದಾದ ಪ್ರತ್ಯೇಕ ಕೊಠಡಿಗಳು, ಸ್ನಾನಗೃಹ ಹಾಗೂ ಶೌಚಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಾಲವಾದ, ಸ್ವಚ್ಛ ಹಾಗೂ ಸುಸಜ್ಜಿತ ಪಾಕಶಾಲೆ ಮತ್ತು ಊಟದ ಮನೆಯೂ ಆಶ್ರಮದ ವಿಶೇಷತೆಗಳಾಗಿವೆ.

ಆಧ್ಯಾತ್ಮಿಕ ನೆಮ್ಮದಿಗಾಗಿ ಔದುಂಬರ ವೃಕ್ಷದ ಸನ್ನಿಧಿಯಲ್ಲಿ ಶ್ರೀ ದತ್ತಾತ್ರೇಯ, ಶ್ರೀ ಗಣೇಶ, ಶ್ರೀ ವಿಠಲ-ರುಕ್ಮಿಣಿ ಹಾಗೂ ಆಂಜನೇಯನ ಮಂದಿರಗಳನ್ನು ನಿರ್ಮಿಸಲಾಗಿದ್ದು, ನಿತ್ಯವೂ ಶಾಸ್ತ್ರೋಕ್ತ ಪೂಜೆಗಳು ನಡೆಯುತ್ತವೆ.

ಆರೋಗ್ಯ ಮತ್ತು ಸಂತೋಷಕ್ಕೆ ಆದ್ಯತೆ

ಹಿರಿಯರ ವಯೋಮಾನ ಹಾಗೂ ಆರೋಗ್ಯಕ್ಕೆ ಅನುಗುಣವಾಗಿ ವೈದ್ಯರ ಸಲಹೆಯ ಮೇರೆಗೆ ಶುಚಿ-ರುಚಿಯಾದ ಸಾತ್ವಿಕ ಸಸ್ಯಾಹಾರಿ ಉಪಾಹಾರ ಮತ್ತು ಭೋಜನವನ್ನು ಸಿದ್ಧಪಡಿಸಲಾಗುತ್ತದೆ.

ಪ್ರತಿದಿನ ವೈದ್ಯರು ಆಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವುದು ಇಲ್ಲಿನ ಸೇವಾ ವ್ಯವಸ್ಥೆಯ ಮತ್ತೊಂದು ಪ್ರಮುಖ ಅಂಶವಾಗಿದೆ.

ಹಬ್ಬ-ಹರಿದಿನಗಳ ಆಚರಣೆ, ವಿಶೇಷ ಸಮಾರಂಭಗಳು ಹಾಗೂ ವಾರ್ಷಿಕ ಪ್ರವಾಸದ ಮೂಲಕ ಹಿರಿಯರ ಬದುಕಿನಲ್ಲಿ ಸಂತಸ ಮತ್ತು ಚೈತನ್ಯ ತುಂಬುವ ಪ್ರಯತ್ನವೂ ನಡೆಯುತ್ತಿದೆ.

ಭವಿಷ್ಯದಲ್ಲಿ ಇನ್ನಷ್ಟು ಸೇವಾ ವಿಸ್ತರಣೆಯ ಸಂಕಲ್ಪ

25 ವರ್ಷಗಳ ಸೇವಾ ಪಯಣವನ್ನು ಸ್ಮರಿಸುತ್ತಿರುವ ಘರಕುಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಿರಿಯರಿಗೆ ನೆರವಾಗುವ ಉದ್ದೇಶದಿಂದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿಕೊಂಡಿದೆ

ಆಶ್ರಮದ ಮುಖ್ಯ ಕಟ್ಟಡದ ಮೇಲೆ ನೂತನ ಮಹಡಿ ನಿರ್ಮಿಸಿ ಹೆಚ್ಚಿನ ಸಂಖ್ಯೆಯ ಅಶಕ್ತ ಹಿರಿಯರಿಗೆ ಆಶ್ರಯ ಕಲ್ಪಿಸುವುದು, 24 ಗಂಟೆಗಳ ತುರ್ತು ಚಿಕಿತ್ಸಾ ವಾಹನ, ನುರಿತ ದಾದಿಯರಿರುವ ಆಧುನಿಕ ಪುನಶ್ಚೇತನ ಕೇಂದ್ರ, ವೈದ್ಯಕೀಯ ಉಪಕರಣಗಳಿರುವ ಚಿಕಿತ್ಸಾ ಕೊಠಡಿ, ಯೋಗ ಮತ್ತು ಪ್ರಾಣಾಯಾಮ ಮಂದಿರ, ಡಿಜಿಟಲ್ ಕೊಠಡಿ, ಸುಧಾರಿತ ಭದ್ರತಾ ವ್ಯವಸ್ಥೆ, ವಿಶಾಲ ಸಭಾಂಗಣ, ನೀರಿನ ಶುದ್ಧೀಕರಣ ಘಟಕ ಹಾಗೂ ಸೌರಶಕ್ತಿ ವ್ಯವಸ್ಥೆ ಕಲ್ಪಿಸುವುದು ಸಂಸ್ಥೆಯ ಮುಂದಿನ ಗುರಿಗಳಾಗಿವೆ.

ಸಾರ್ವಜನಿಕರ ಸಹಕಾರಕ್ಕೆ ಮನವಿ

ಘರಕುಲವು ಹಿರಿಯರಿಗೆ ಸೇವೆ ಸಲ್ಲಿಸುವ ಮಹತ್ಕಾರ್ಯವನ್ನು ಸಮಾಜದ ಸೇವಾ ಯಜ್ಞವೆಂದು ಪರಿಗಣಿಸಿದ್ದು, ಆಶ್ರಯ ಪಡೆದವರಿಂದ ಕೇವಲ ಪ್ರಾತಿನಿಧಿಕ ಕನಿಷ್ಠ ನಿರ್ವಹಣಾ ವೆಚ್ಚವನ್ನು ಮಾತ್ರ ಪಡೆಯುತ್ತಿದೆ.

ಮೂಲಸೌಕರ್ಯಗಳ ನಿರ್ಮಾಣ, ನಿರ್ವಹಣೆ ಹಾಗೂ ದೈನಂದಿನ ಖರ್ಚು-ವೆಚ್ಚಗಳಿಗಾಗಿ ಸಾರ್ವಜನಿಕರ ಉದಾರ ದೇಣಿಗೆಯನ್ನೇ ಮುಖ್ಯವಾಗಿ ಅವಲಂಬಿಸಿದೆ.

ಹೀಗಾಗಿ, ಹಿರಿಯರ ಬದುಕಿನಲ್ಲಿ ಭರವಸೆ ಮತ್ತು ನೆಮ್ಮದಿ ಮೂಡಿಸುವ ಈ ಸೇವಾ ಕಾರ್ಯಕ್ಕೆ ವೈಯಕ್ತಿಕ ದೇಣಿಗೆ ಹಾಗೂ ಸಿಎಸ್‌ಆರ್‌ (CSR) ನಿಧಿಯ ಮೂಲಕ ಕೈಜೋಡಿಸುವಂತೆ ಸಂಸ್ಥೆ ಮನವಿ ಮಾಡಿದೆ. ಅರ್ಹ ದೇಣಿಗೆಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G ಅಡಿಯಲ್ಲಿ ನಿಯಮಾನುಸಾರ ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಿದೆ.

ಹಿರಿಯರ ಬಾಳಿನ ಸಂಧ್ಯಾಕಾಲವನ್ನು ಪ್ರೀತಿ, ಗೌರವ ಮತ್ತು ಭರವಸೆಯಿಂದ ಬೆಳಗಿಸುವ ಉದ್ದೇಶದೊಂದಿಗೆ 25 ವರ್ಷಗಳಿಂದ ಸಾಗಿಬಂದಿರುವ ಘರಕುಲದ ರಜತ ಮಹೋತ್ಸವವು, ಸೇವಾ ಪಯಣದ ಸ್ಮರಣೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹಿರಿಯರಿಗೆ ಆಸರೆಯಾಗುವ ಹೊಸ ಸಂಕಲ್ಪಕ್ಕೂ ಸಾಕ್ಷಿಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಮಿಛಾಯಾ ಪ್ರತಿಷ್ಠಾನ ಹಾಗೂ ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಪ್ರತಿಷ್ಠಾನದ ಅಧ್ಯಕ್ಷ ರಾಜೀವ ಪೋತದಾರ,
ಕಾರ್ಯದರ್ಶಿ ಎನ್. ಬಿ. ದೇಶಪಾಂಡೆ, ಖಜಾಂಚಿ ಚಿಂತಾಮಣಿ ಗ್ರಾಮೋಪಾಧ್ಯೆ ಮೊದಲಾದವರು ಇದ್ದರು.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ