ಚಿಕ್ಕೋಡಿ: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಮೃತರನ್ನು ಪಟ್ಟಣಕುಡಿ ನಿವಾಸಿ ಕುಮಾರಿ ಪ್ರೀತಿ ಬಾಳಾಸೋ ಗೌರಾಯಿ (27) ಎಂದು ಗುರುತಿಸಲಾಗಿದ್ದು, ಡಿ-ಫಾರ್ಮಸಿ ಪದವೀಧರೆ ಎಂದು ತಿಳಿದುಬಂದಿದೆ.
ಬೊರಗಾವ-ಬೆಡಕಿಹಾಳ ರಸ್ತೆಯ ಬೊರಗಾವವಾಡಿ-ಶಿರೋಳೆ ಮಳಕೆ ಅಪಘಾತ ಸಂಭವಿಸಿದೆ. ಮೃತ ಪ್ರೀತಿ ಸಹೋದರನೊಂದಿಗೆ KA23HD3880 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಪಟ್ಟಣಕುಡಿಯಿಂದ ಜಯಸಿಂಪುರದಲ್ಲಿರುವ ಸಂಬಂಧಿಕರ ಬಳಿಗೆ ತೆರಳುತ್ತಿದ್ದರು. ಈ ವೇಳೆ ಅಬ್ದುಲಾಟ್‌ನಿಂದ ಹುನ್ನರಗಿ ಕಡೆಗೆ ಭೂಮಿಪೂಜೆಗಾಗಿ MH51H4846 ಸಂಖ್ಯೆಯ ಬೈಕ್‌ನಲ್ಲಿ ಬರುತ್ತಿದ್ದ ಪ್ರಥಮೇಶ್ ಕಾಂಬಳೆ ಅವರ ವಾಹನವು ಮುಖಾಮುಖಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಪ್ರೀತಿ ರಸ್ತೆಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣವೇ ಗಾಯಗೊಂಡ ಪ್ರೀತಿಯನ್ನು ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ಸಹೋದರ ಹಾಗೂ ಸ್ಥಳೀಯರು ಕರೆದೊಯ್ದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮತ್ತೊಂದು ಬೈಕ್‌ನ ಸವಾರರಾದ ಪ್ರಥಮೇಶ್ ಕಾಂಬಳೆ ಹಾಗೂ ಪ್ರೇಮ್ ಕಾಂಬಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೊರಗಾವವಾಡಿ-ಬೊರಗಾವ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಆ ಗುಂಡಿಗಳನ್ನು ತಪ್ಪಿಸಲು ಹೋಗಿಯೇ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಭಾರಿ ಶಬ್ದ ಕೇಳಿ ಸುತ್ತಮುತ್ತಲಿನ ಸಾರ್ವಜನಿಕರು ತಕ್ಷಣವೇ ದೌಡಾಯಿಸಿ ಸಹಾಯಕ್ಕೆ ಮುಂದಾದರೂ, ಯುವತಿಯ ಜೀವ ಉಳಿಸಲು ಸಾಧ್ಯವಾಗಲಿಲ್ಲ.
Laxmi News 24×7