ತುಮಕೂರು: ರಾಜಣ್ಣ ಪುತ್ರ ಎಂಎಲ್ಸಿ ರಾಜೇಂದ್ರ ಜೆಡಿಎಸ್ ವರಿಷ್ಠ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ.
ಕೆಎನ್ ರಾಜಣ್ಣ ಕಾಂಗ್ರೆಸ್ ಪಕ್ಷದ ನೇರ ನುಡಿಯ ನಾಯಕ. ಸ್ವಪಕ್ಷ ಇರಲಿ, ವಿರೋಧ ಪಕ್ಷ ಇರಲಿ ತಪ್ಪನ್ನು ಖಂಡಾತುಂಡವಾಗಿ ಹೇಳುವ ಜಾಯಮಾನ ಅವರದು. ಹಾಗಾಗಿಯೇ ಅವರನ್ನು ರೆಬೆಲ್ ರಾಜಣ್ಣ ಅನ್ನೋದು. ಮಾಜಿ ಸಿಎಂ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರಾಗಿರುವ ರಾಜಣ್ಣ ವೋಟ್ ಚೋರಿ ವಿಚಾರದಲ್ಲಿ ತಮ್ಮ ಪಕ್ಷದ್ದೂ ತಪ್ಪಿದೆ ಎಂದು ಹೇಳಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಆದಾದನಂತರ ಕಾಂಗ್ರೆಸ್ನಲ್ಲಿ ರಾಜಣ್ಣರನ್ನು ಅಷ್ಟು ಚೆನ್ನಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಸಿಎಂ ಆದಾಗಿಂದ ಮತ್ತಷ್ಟು ತೊಡಕು ರಾಜಣ್ಣರಿಗೆ ಆರಂಭವಾಯಿತು. ರಾಜಣ್ಣರ ಪುತ್ರ ಎಮ್ಎಲ್ಸಿ ರಾಜೇಂದ್ರರನ್ನು ಕೂಡ ಕಡೆಗಣನೆ ಮಾಡಲಾಗುತ್ತಿತ್ತು. ಈ ನಡುವೆ ಅಪ್ಪ ಮತ್ತು ಮಗನ ವಿರುದ್ಧ ಹನಿಟ್ರಾಪ್ ಮಾಡುವ ಸಂಚೂ ನಡೆದಿತ್ತು. ಈ ಎಲ್ಲಾ ಬೆಳವಣಿಗೆಯಿಂದ ರಾಜಣ್ಣ ಆಂಡ್ ಫ್ಯಾಮಿಲಿ ತೆನೆ ಹೊರಲಿದ್ದಾರೆ ಎಂಬ ಸೂಚನೆಗಳು ಬರುತ್ತಿದೆ.
ರಾಜೇಂದ್ರ ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದ್ದಾರೆ. ಸ್ಟಿಂಗ್ ಆಪರೇಷನ್, ಹನಿ ಟ್ರಾಪ್ ಕುರಿತೂ ಉಭಯ ನಾಯಕರು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಹೆಚ್ಡಿಕೆ ಸ್ವತಃ ರಾಜೇಂದ್ರವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ರಾಜೇಂದ್ರ ನಸುನಕ್ಕಿ ಸುಮ್ಮನಾದರು ಎಂಬ ಮಾಹಿತಿ ಲಭ್ಯವಾಗಿದೆ. ಒಂದು ಕಡೆ ಸ್ಟಿಂಗ್ ಆಪರೇಷನ್ಗಳ ಸದ್ದು, ಇನ್ನೊಂದು ಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ. ಈ ಸಂದರ್ಭದಲ್ಲಿ ರಾಜೇಂದ್ರ ರಾಜಣ್ಣ ಕುಮಾರಸ್ವಾಮಿ ಅವರನ್ನು ಕಂಡು ಚರ್ಚಿಸಿದ್ದು ಹಲವು ರೆಕ್ಕೆ ಪುಕ್ಕ ಹುಟ್ಟಲು ಕಾರಣವಾಗಿದೆ.
ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ರಾಜಣ್ಣರ ಪತ್ನಿ ಶಾಂತಲಾ ರಾಜಣ್ಣ ತಯಾರಿ ನಡೆಸಿದ್ದಾರೆ. ಇನ್ನೊಂದು ಕಡೆ ಮಹಿಳಾ ಮೀಸಲಾತಿ ಜಾರಿಯಾದರೇ ರಾಜಣ್ಣರ ಪುತ್ರಿ ರಶ್ಮಿ ವಿಧಾನಸಭೆಗೆ ಸ್ಪರ್ಧೆ ಮಾಡಲಿದ್ದಾರೆ. ಒಂದು ವೇಳೆ ರಾಜಣ್ಣರ ಫ್ಯಾಮಿಲಿ ಕಾಂಗ್ರೆಸ್ ತೊರೆದರೆ ಇಡೀ ಕುಟುಂಬ ದಳಪತಿಗಳ ಸೇನೆ ಸೇರುವ ಸಾಧ್ಯತೆಯಿದೆ.
Laxmi News 24×7