ಬೆಂಗಳೂರು: ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ನಿತ್ಯ 2 ಗಂಟೆ ಮಾತ್ರ VIP ದರ್ಶನ ಇರಲಿದೆ. ಉಳಿದ ಸಮಯ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರಲಿದೆ ಅಂತ ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ಹಾಸನಾಂಬ ಜಾತ್ರಾ ಮಹೋತ್ಸವ ಅ.29 ರಿಂದ ಪ್ರಾರಂಭ ಆಗುತ್ತದೆ. ನವೆಂಬರ್ 11 ರವರೆಗೆ ದರ್ಶನ ಇರುತ್ತೆ. ಕಳೆದ ವರ್ಷ 25 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡ್ತೀವಿ, ಎಲ್ಲಾ ಸಿದ್ದತೆ ಮಾಡಿದ್ದೇವೆ ಎಂದರು.
ದಸರಾ ರೀತಿ ಇದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಇರಲಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಜಾಸ್ತಿ ಜನ ಬರುವ ನಿರೀಕ್ಷೆ ಇದೆ. ಸಿಎಂ, ಡಿಸಿಎಂ, ಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆ. ಅದ್ಧೂರಿಯಾಗಿ ಈ ಮಹೋತ್ಸವ ಮಾಡ್ತೀವಿ ಎಂದರು.
ದಸರಾದಲ್ಲಿ ದಲಿತ ಸಚಿವರ ಅಪಮಾನ ಏನ್ ನಡೀತು ನನಗೆ ಗೊತ್ತಿಲ್ಲ. ಸಚಿವರನ್ನ ಬಿಡಬೇಕಿತ್ತು. ಯಾಕೆ ನಡೀತು ಗೊತ್ತಿಲ್ಲ. ಆದರೆ ನಮ್ಮ ಹಾಸನಾಂಬದಲ್ಲಿ ಈ ರೀತಿ ಆಗಿಲ್ಲ. ಹಾಸನಾಂಬದಲ್ಲಿ VIP ಗಳಿಗೆ ಸಮಯ ನಿಗದಿ ಮಾಡಿದ್ದೇವೆ. ದಿನಕ್ಕೆ 2 ಗಂಟೆ ಮಾತ್ರ ಸಮಯ ಕೊಡ್ತೀವಿ. ಬೆಳಗ್ಗೆ 10.30 ಯಿಂದ 12.30 VIP ಗಳಿಗೆ ಮಾತ್ರ ದರ್ಶನ. ಉಳಿದ ಸಮಯದಲ್ಲಿ ಜನರಿಗೆ ದರ್ಶನ ಇರುತ್ತದೆ. ಈ ವರ್ಷ ಒಟ್ಟು 3,500 VIP ಪಾಸ್ ಇರಲಿದೆ. VIP ಪಾಸ್ ಅವರನ್ನು ಪ್ರವಾಸ ಮಂದಿರದಲ್ಲಿ ಇಳಿಸಿಕೊಂಡು ನಾವೇ ದರ್ಶನ ಮಾಡಿಸಿ ಕಳಿಸ್ತೀವಿ. ಜನರಿಗೆ ವಿಶೇಷ ಪಾಸ್ 1000 ರೂ. ಮಾಡಿದ್ದೇವೆ. ಅವರಿಗೆ ಪ್ರತ್ಯೇಕ ಕ್ಯೂ ಇರಲಿದೆ ಅಂತ ಮಾಹಿತಿ ನೀಡಿದ್ರು.
Laxmi News 24×7