Breaking News

ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲಾಗಿ ಓಡಿದ ಆನೆ; ವೈಜ್ಞಾನಿಕ ವರದಿ ಬಳಿಕ ಕ್ರಮ: ಮಧು ಬಂಗಾರಪ್ಪ

Spread the love

ಬೆಂಗಳೂರು: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ (Shivamogga Dasara) ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಗಾಬರಿಯಾಗಿ ಓಡಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.

ಬೆಂಗಳೂರಿನ ಗೃಹ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನೆ ಗಾಬರಿಯಾಗಿ ಓಡಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಒಂದು ಕಡೆ ಬ್ಯಾಂಡ್ ವಾದ್ಯಗಳ ಶಬ್ದ, ಮತ್ತೊಂದೆಡೆ ಕಿಕ್ಕಿರಿದು ಸೇರಿದ್ದ ಜನರನ್ನು ಕಂಡು ಆನೆ ಬೆದರಿ ಓಡಿರಬಹುದು. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸಹಜವಾಗಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಕಳೆದ ವರ್ಷ ಶಿವಮೊಗ್ಗ ದಸರಾ ಅತ್ಯಂತ ಸಡಗರದಿಂದ ನಡೆದಿತ್ತು. ಈ ಬಾರಿ ಆನೆಯನ್ನು ಬದಲಾಯಿಸಲು ಕಾರಣವೇನು ಎಂಬ ಪ್ರಶ್ನೆಯೂ ಎದುರಾಗಿದೆ. ಸೋಮಣ್ಣ ಆನೆ ಆರೋಗ್ಯವಾಗಿತ್ತು ಎಂಬ ಮಾಹಿತಿ ಇದೆ. ಆದರೂ ಘಟನೆಗೆ ನಿಖರವಾದ ಕಾರಣವೇನು ಎಂಬುದನ್ನು ವೈಜ್ಞಾನಿಕ ವರದಿಯಿಂದ ತಿಳಿದುಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

ಅಧಿಕಾರಿಗಳ ಲೋಪದಿಂದ ಘಟನೆ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ತಕ್ಷಣವೇ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಹೇಳುವುದು ಸರಿಯಲ್ಲ. ಮೊದಲು ವೈಜ್ಞಾನಿಕ ವರದಿ ಬರಲಿ. ಅದರ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ಮಾತನಾಡುತ್ತೇನೆ ಎಂದರು.

ಮೈಸೂರು ದಸರಾ ಸಂದರ್ಭದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ವೇಳೆ ಮೂವರು ಸಚಿವರನ್ನು ಮೈಸೂರು ಪೊಲೀಸ್ ವರಿಷ್ಠಾಧಿಕಾರಿಗಳು ತಡೆದಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಮಧು ಬಂಗಾರಪ್ಪ, ಬಿಜೆಪಿ ನಾಯಕರು ದಲಿತ ಸಚಿವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಸಚಿವರು ದಲಿತರಾಗಿರುವುದು ಕಾಕತಾಳೀಯವಾದರೂ, ಯಾವುದೇ ಸಚಿವರಿಗೂ ಇಂತಹ ಪರಿಸ್ಥಿತಿ ಎದುರಾಗಬಾರದು ಎಂಬುದು ನನ್ನ ಅಭಿಪ್ರಾಯ ಎಂದರು.

ಈ ವಿಚಾರವಾಗಿ ಮುಖ್ಯಮಂತ್ರಿ ಅವರು ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದರು.

ಭಾರತ್ ಜೋಡೋ 2.0 ಹೋರಾಟ
ಭಾರತ್ ಜೋಡೋ 2.0 ಪಾದಯಾತ್ರೆ ಶಿಕಾರಿಪುರಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಹೋರಾಟ ಯಾವಾಗಲೂ ಮುಂದುವರಿಯುತ್ತದೆ. ಮುಂದಿನ ಹೋರಾಟಗಳ ಕುರಿತು ಪಕ್ಷದ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಮಾಹಿತಿ ನೀಡಲಿದ್ದಾರೆ ಎಂದರು.

ನಮ್ಮ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಆರೋಪದ ಕುರಿತು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಮುಂದಿನ ತಿಂಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ನಾವೆಲ್ಲರೂ ಭಾಗವಹಿಸಲಿದ್ದೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.


Spread the love

About Laxminews 24x7

Check Also

ದೆಹಲಿ ಹೈಕೋರ್ಟ್‌ನಲ್ಲಿ ನೆಹಾ ಬೋರಾಗೆ ಹಿನ್ನಡೆ – 10,000 ರೂ. ಬಾಂಡ್‌ಗೆ ಸಹಿ ಹಾಕಿ ಶಾಂತಿ ಕಾಪಾಡುವಂತೆ ಸೂಚನೆ

Spread the loveನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ