ಮಂಡ್ಯ: ರಾಜ್ಯದ ಜನತೆಗೆ ಶೀಘ್ರದಲ್ಲೇ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ. ವಿಧಾನ ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಅಕ್ಟೋಬರ್ 27ರಂದು ಹಾಲಿನ ಪರಿಷ್ಕೃತ ದರ ಪ್ರಕಟವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ನೂರಾರು ರೈತರು ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯ ಗಣಂಗೂರು ಟೋಲ್ ಬಳಿ ಹೆದ್ದಾರಿ ತಡೆದು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಆಗಮಿಸಿ ರೈತರನ್ನುದ್ದೇಶಿಸಿ ಮಾತನಾಡಿದ ಚಲುವರಾಯಸ್ವಾಮಿ ರೈತರ ಹೋರಾಟ ನ್ಯಾಯಯುತವಾಗಿದೆ ಎಂದು ಹೇಳಿದರು. ಅಕ್ಟೋಬರ್ 26ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ರೈತರ ಮಹತ್ವದ ಸಭೆ ಕರೆದಿದ್ದು, ಅಲ್ಲಿ ಸಮಸ್ಯೆಗಳನ್ನು ಆಲಿಸಿ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಹಾಲಿನ ದರ ಏರಿಕೆ ಕುರಿತು ಈಗಾಗಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅಧಿಕೃತ ಘೋಷಣೆ ವಿಳಂಬವಾಗಿತ್ತು. ನೀತಿ ಸಂಹಿತೆ ತೆರವಾದ ಕೂಡಲೇ ಅಕ್ಟೋಬರ್ 27ರಂದು ಹೊಸ ದರವನ್ನು ಪ್ರಕಟಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತಿದೆ. ರೈತರ ಸಾಲ ಮನ್ನಾ ವಿಚಾರದಲ್ಲೂ ತಾರತಮ್ಯವಾಗಿದೆ. ಆದ್ದರಿಂದ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಕೇಂದ್ರದ ಮುಂದೆ ಹಕ್ಕೊತ್ತಾಯ ಮಂಡಿಸಲಾಗುವುದು. ಆರ್ಥಿಕ ಸವಾಲುಗಳ ನಡುವೆಯೂ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಭತ್ತ, ರಾಗಿ ಬೆಂಬಲ ಬೆಲೆ ಏರಿಕೆ ಮಾಡಲಾಗಿದ್ದು, ಯಾವುದೇ ಯೋಜನೆ ಅಥವಾ ಸೌಲಭ್ಯಗಳನ್ನು ಮೊಟಕುಗೊಳಿಸಿಲ್ಲ ಎಂದು ಸಮರ್ಥಿಸಿಕೊಂಡರು.
Laxmi News 24×7