Breaking News

ಇಡ್ಲಿಯಲ್ಲಿ ದತ್ತೂರ ಬೀಜದ ಪುಡಿ ಬೆರೆಸಿ ಪತಿ ಕೊಲೆ: ಪತ್ನಿ, ಪ್ರಿಯಕರ ಅರೆಸ್ಟ್

Spread the love

ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು  ಬಂಧಿಸಿದ್ದಾರೆ.

ಮೈಸೂರಿನ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 35 ವರ್ಷದ ರಾಮಪ್ರಸಾದ್ ಕೊಲೆಯಾದ ದುರ್ದೈವಿ. ಮೈಸೂರಿನ ಕೆಸರೆಯ ಪವಿತ್ರಾಳನ್ನು ರಾಮಪ್ರಸಾದ್ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಗು ಇದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಈ ಸಂಸಾರದಲ್ಲಿ ಮತ್ತೊಬ್ಬನ ಪ್ರವೇಶವಾಗಿತ್ತು. ಅದೇ ಗ್ರಾಮದ ಸುನೀಲ್ ಎಂಬಾತನ ಜೊತೆ ಪವಿತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ಟೋಬರ್ 16ರಂದು ಕುಡಿದು ಮನೆಗೆ ಬಂದಿದ್ದ ರಾಮಪ್ರಸಾದ್‌ಗೆ ಪತ್ನಿ ಪವಿತ್ರಾ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಳು. ಆದರೆ, ಇದರಿಂದ ರಾಮಪ್ರಸಾದ್ ಮೃತಪಟ್ಟಿರಲಿಲ್ಲ. ಬಳಿಕ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ದತ್ತೂರಿ ಬೀಜದ ಬಗ್ಗೆ ಯೂಟ್ಯೂಬ್‌ನಲ್ಲಿ ಮಾಹಿತಿ ಪಡೆದು ಕೃತ್ಯ ಎಸಗಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಾಮಪ್ರಸಾದ್ ಮೃತಪಟ್ಟ ಬಳಿಕ ಪವಿತ್ರಾ, ಆತನ ಸಹೋದರ ಚಂದ್ರಹಾಸನಿಗೆ ಕರೆ ಮಾಡಿದ್ದಳು. ಮೊಸರು ತಿಂದು ಮಲಗಿದ್ದ ರಾಮಪ್ರಸಾದ್ ಎದ್ದೆಳುತ್ತಿಲ್ಲ ಎಂದು ತಿಳಿಸಿದ್ದಳು. ತಕ್ಷಣವೇ ಸ್ಥಳಕ್ಕೆ ಬಂದ ಚಂದ್ರಹಾಸ, ಅಣ್ಣನನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ, ಅಷ್ಟರಲ್ಲಾಗಲೇ ರಾಮಪ್ರಸಾದ್ ಮೃತಪಟ್ಟಿದ್ದ. ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಯೂ ನಡೆದಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು. ರಾಮಪ್ರಸಾದ್ ಸಾವಿನ ದಿನವೇ ರಾತ್ರಿ ಆರೋಪಿ ಸುನೀಲ್ ಮನೆಗೆ ಬಂದಿದ್ದ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿತ್ತು ಎನ್ನಲಾಗಿದೆ. 

ಅಣ್ಣನ ಸಾವಿನ ಬಗ್ಗೆ ಅನುಮಾನಗೊಂಡ ಚಂದ್ರಹಾಸ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸತ್ಯಾಂಶಗಳು ಹೊರಬಂದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಹಾಗೂ ಆಕೆಯ ಪ್ರಿಯಕರ ಸುನೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ದೆಹಲಿ ಹೈಕೋರ್ಟ್‌ನಲ್ಲಿ ನೆಹಾ ಬೋರಾಗೆ ಹಿನ್ನಡೆ – 10,000 ರೂ. ಬಾಂಡ್‌ಗೆ ಸಹಿ ಹಾಕಿ ಶಾಂತಿ ಕಾಪಾಡುವಂತೆ ಸೂಚನೆ

Spread the loveನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ