ಬಾಗಲಕೋಟೆ: ಎರಡು ಎಕರೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೈದುನನೇ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ನೆಡೆದಿದೆ.
ಮಂಗಳಾ ದೇವಿ ಹಾಗೂ ಚನ್ನಪ್ಪಗೌಡ ನಾಡಗೌಡರ್ ಎಂಬವರ ಮಧ್ಯೆ ಸುಮಾರು ವರ್ಷಗಳಿಂದ ಆರು ಎಕರೆ ಆಸ್ತಿ ವಿವಾದ ನಡೆದಿತ್ತು. ಚನ್ನಪ್ಪಗೌಡ ಮಂಗಾಳಾದೇವಿಯವರ ಎರಡು ಎಕರೆ ಹೊಲ ಅತಿಕ್ರಮಣ ಮಾಡಿದ್ದಾನೆ ಎಂಬ ಆರೋಪ ಇತ್ತು. ಹೀಗಾಗಿ ಮಂಗಾಳಾದೇವಿಯವರು ಸರ್ವೇಯರ್ ಮೂಲಕ ಹೊಲ ಅಳೆಸಿದಾಗ, ಎರಡು ಎಕರೆ ಅತಿಕ್ರಮಣ ಆಗಿರೋದು ಗೊತ್ತಾಗಿತ್ತು.
ಅತಿಕ್ರಮಣ ಮಾಡಿದ ಹೊಲ ಬಿಟ್ಟುಕೊಡು ಎಂದು ಚನ್ನಪ್ಪಗೌಡಗೆ ಮಂಗಳಾದೇವಿ ಕೇಳಲು ಹೋದಾಗ, ಮೈದುನ ಚನ್ನಪ್ಪಗೌಡ ತನ್ನ ಅವರ ಮೇಲೆಯೇ ಬೊಲೆರೊ ವಾಹನ ಹಾಯಿಸಿ ಕೊಲೆಗೆ ಯತ್ನಿಸಿದ್ದಾನೆ. ಮಂಗಳಾದೇವಿಯವರ ಕಾಲಿಗೆ ಗಂಭೀರ ಗಾಯವಾಗಿದ್ದು, ದೇಹದ ಒಳಭಾಗದಲ್ಲೂ ಪೆಟ್ಟಾಗಿದೆ. ಸಧ್ಯ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳಾದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಮೈದುನ ಚೆನ್ನಪ್ಪಗೌಡ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ.ಮಂಗಳಾದೇವಿ ಅವರು ಇತ್ತೀಚೆಗೆ ಸರ್ವೇಯರ್ ಮೂಲಕ ಆಸ್ತಿ ಅಳತೆ ಮಾಡಿಸಿ ಬೇಲಿ ಹಾಕಿ ಬಿತ್ತನೆ ಮಾಡಿದ್ದರು. ಇದಕ್ಕೆ ಚೆನ್ನಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದ್ದ. ಈ ಹಿಂದೆ ಬಿತ್ತಿದ ಹೊಲವನ್ನೂ ಹರಗಿದ್ದ. ಇಂದು ಮಂಗಳಾದೇವಿ ಅವರು ಮತ್ತೊಂದು ಹೊಲದಲ್ಲಿದ್ದಾಗ ಅಲ್ಲಿಗೆ ಬಂದ ಮೈದುನ ಚೆನ್ನಪ್ಪಗೌಡ, ತನ್ನ ಬೊಲೆರೊ ವಾಹನವನ್ನು ಅವರ ಮೇಲೆಯೇ ಹರಿಸಿದ್ದಾನೆ.
ಈ ಭೀಕರ ದೃಶ್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ. ತಾಯಿಯ ಮೇಲೆ ಕಾರು ಹಾಯಿಸುವುದನ್ನು ಕಂಡು ಮಗಳು ಪ್ರಿಯಾಂಕಾ “ಕಾಕಾ ಕಾರ್ ಹಾಯಿಸಬೇಡ” ಎಂದು ಗೋಗರೆದಿದ್ದಾಳೆ. ಆದರೆ ಆರೋಪಿ ಸ್ವಲ್ಪವೂ ಕರುಣೆ ತೋರದೆ ವಾಹನ ಹರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಂಗಳಾದೇವಿ ಹಾಗೂ ಆರೋಪಿ ಚನ್ನಪ್ಪಗೌಡ ಇಬ್ಬರೂ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರ ಸಂಬಂಧಿಕರಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಎಸ್.ಆರ್. ಪಾಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಂಗಳಾದೇವಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಈ ಸಂಬಂಧ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Laxmi News 24×7