ಬೆಳಗಾವಿ: ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಈಗ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯ ಸರ್ಕಾರವೂ ಪ್ರತಿ ಟನ್ ಕಬ್ಬಿಗೆ 1,000 ರೂಪಾಯಿ ಪ್ರೋತ್ಸಾಹಧನ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಬೆಳಗಾವಿಯ ಹತ್ತರಗಿ ಟೋಲ್ನಿಂದ ಆರಂಭವಾಗಿರುವ ಕಬ್ಬು ಬೆಳೆಗಾರರ ಬೃಹತ್ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ಗುರುವಾರ ರಾತ್ರಿ ಬೆಳಗಾವಿಯ ಸುವರ್ಣ ವಿಧಾನಸೌಧದ ಪಕ್ಕದಲ್ಲಿರುವ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದ ನೂರಾರು ರೈತರು, ಇಂದು ಬೆಳಿಗ್ಗೆ ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ.
ಪ್ರತಿದಿನ ಸರಾಸರಿ 25 ಕಿಲೋಮೀಟರ್ ಸಾಗುತ್ತಿರುವ ಈ ನಡಿಗೆ, ಇಂದು ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ತಲುಪಲಿದೆ. ಕೇಂದ್ರ ಸಚಿವ ಜೋಶಿ ಅವರ ಮನವಿಗೂ ಜಗ್ಗದ ಅನ್ನದಾತರು, ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರಮುಖ ಬೇಡಿಕೆಗಳೇನು?
ಸಕ್ಕರೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕೆಜಿಗೆ 60 ರೂಪಾಯಿಗೆ ಹೆಚ್ಚಿಸಬೇಕು. ಹೀಗಾದಲ್ಲಿ ಮಾತ್ರ ರೈತರಿಗೆ ಪ್ರತಿ ಟನ್ ಕಬ್ಬಿಗೆ ಸರಾಸರಿ 5,500 ರೂಪಾಯಿ ಬೆಲೆ ಸಿಗಲು ಸಾಧ್ಯ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ತುರ್ತು ಸಭೆ ನಡೆಸಿ ರೈತರ ಹಿತ ಕಾಯಬೇಕು.
ಹುಬ್ಬಳ್ಳಿಯಲ್ಲಿ ಜನಾಂದೋಲನ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಕೇಂದ್ರ ಸರ್ಕಾರ ಹಾಗೂ ರಾಜಕಾರಣಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ನಮ್ಮ ಪಾದಯಾತ್ರೆ ಹುಬ್ಬಳ್ಳಿ ತಲುಪುವಷ್ಟರಲ್ಲಿ ಕೇಂದ್ರ ಸರ್ಕಾರ ಎಂಎಸ್ಪಿ ದರ ಹೆಚ್ಚಳ ಘೋಷಿಸಬೇಕು. ಅಷ್ಟರೊಳಗೆ ರಾಜ್ಯ ಸರ್ಕಾರವೂ ಪ್ರೋತ್ಸಾಹಧನದ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಜನಾಂದೋಲನ ನಡೆಸಿ ಎರಡೂ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Laxmi News 24×7