ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ನಡೆದಿದೆ.
12 ವರ್ಷದ ತರುಣ್, ಭುವನ್ ಹಾಗೂ ಲಿಖಿತ್ ಮೃತ ಮಕ್ಕಳು. ಮೂವರು ಮಕ್ಕಳು 6ನೇ ತರಗತಿಯಲ್ಲಿ ಓದುತ್ತಿದ್ದು, ಒಂದೇ ಗ್ರಾಮದವರಾಗಿದ್ದರೂ ಬೇರೆ ಬೇರೆ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ದಸರಾ ರಜೆ ಇದ್ದ ಕಾರಣ ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿರುವ ಮಹಿಳೆಯರು ಬಟ್ಟೆ ಹಾಗೂ ಪಾತ್ರೆ ತೊಳೆಯಲು ಬಳಸುವ ಕಟ್ಟೆಯ ಬಳಿ ಮಕ್ಕಳು ಈಜಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿದ್ದ ಆಳವಾದ ಗುಂಡಿಯಲ್ಲಿ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕಳೆದ ವರ್ಷ ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ಕೆರೆಯ ಆಳ ಹೆಚ್ಚಾಗಿತ್ತು. ಈ ಬಗ್ಗೆ ಅರಿವಿಲ್ಲದೆ ಮಕ್ಕಳು ಈಜಲು ಹೋಗಿದ್ದು, ದುರಂತ ಸಂಭವಿಸಿದೆ.
ಮಕ್ಕಳು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಕೆರೆ ಬಳಿ ಸೇರಿತ್ತು. ಮಕ್ಕಳ ಮೃತದೇಹಗಳನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾಹಿತಿ ತಿಳಿದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Laxmi News 24×7