Breaking News

ಬೆಳಗಾವಿ ಪಾಲಿಕೆಯಲ್ಲಿ ಐತಿಹಾಸಿಕ ಕ್ಷಣ| ಕರ್ನಾಟಕದ ಅವಿಭಾಜ್ಯ ಅಂಗ, ಮಹಾಜನ್ ವರದಿಯೇ ಅಂತಿಮ – ಮಹತ್ವದ ನಿರ್ಣಯ ಪಾಸ್

Spread the love

ಬೆಳಗಾವಿ: ಗಡಿ ವಿಚಾರವಾಗಿ ಸದಾ ಒಂದಿಲ್ಲೊಂದು ವಿವಾದಗಳಿಂದ ಸದ್ದು ಮಾಡುತ್ತಿದ್ದ ಕುಂದಾನಗರಿ ಬೆಳಗಾವಿ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯು ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಹಾಗೂ ‘ಮಹಾಜನ್ ವರದಿಯೇ ಅಂತಿಮ’ ಎಂದು ಸ್ಪಷ್ಟಪಡಿಸುವ ಅಧಿಕೃತ ಹಾಗೂ ಮಹತ್ವದ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಿದೆ.

ಪಾಲಿಕೆಯ ಸಾಮಾನ್ಯ ಸಭೆಯ ಅಂತ್ಯದಲ್ಲಿ ಕನ್ನಡಪರ ನಿರ್ಣಯದ ಕುರಿತು ಪ್ರಸ್ತಾಪಿಸಲಾಯಿತು. ಈ ವೇಳೆ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು 1988ರ ಕರ್ನಾಟಕ ಸರ್ಕಾರದ ಪತ್ರವನ್ನು ಸಭೆಯ ಗಮನಕ್ಕೆ ತಂದು ಓದಿದರು. ಸರ್ಕಾರದ ಪತ್ರದ ಅನ್ವಯ ಮಹಾಜನ್ ವರದಿಯೇ ಅಂತಿಮ ಎಂದು ತೀರ್ಮಾನಿಸಿ, ನಿರ್ಣಯಕ್ಕೆ ಬಹುಮತದಿಂದ ಅನುಮೋದನೆ ದೊರೆತಿದೆ ಎಂದು ಮೇಯರ್ ಪ್ರೀತಿ ಕಾಮಕರ್ ರೂಲಿಂಗ್ ನೀಡಿದರು.

ಮೇಯರ್ ಅವರ ಈ ಐತಿಹಾಸಿಕ ರೂಲಿಂಗ್‌ಗೆ ಪಕ್ಷಭೇದ ಮರೆತು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಮೇಜು ತಟ್ಟಿ ಪೂರ್ಣ ಬೆಂಬಲ ಸೂಚಿಸಿದರು. ಆದರೆ, ಎಂದಿನಂತೆ ತನ್ನ ಗಡಿ ಕ್ಯಾತೆ ಪ್ರದರ್ಶಿಸಿದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಬೆಂಬಲಿತ ಸದಸ್ಯರು ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಭಾ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.

ಪಾಲಿಕೆಯಲ್ಲಿ ಕನ್ನಡಪರ ಐತಿಹಾಸಿಕ ನಿರ್ಣಯ ಪಾಸ್ ಆಗುತ್ತಿದ್ದಂತೆಯೇ ನಗರದ ಹೃದಯಭಾಗವಾದ ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಪರ ಹೋರಾಟಗಾರರು ಹಾಗೂ ಕರವೇ ಕಾರ್ಯಕರ್ತರು ಜಮಾಯಿಸಿ ಭರ್ಜರಿ ವಿಜಯೋತ್ಸವ ಆಚರಿಸಿದರು.

ಪಟಾಕಿ ಸಿಡಿಸಿ, ಸರ್ಕಾರದ ಪರ ಹಾಗೂ ಕನ್ನಡದ ಪರ ಜಯಘೋಷಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ ಹೋರಾಟಗಾರರು, “ಕಳೆದ ಆರು ತಿಂಗಳಿಂದ ನಡೆಸಿದ ಸತತ ಹೋರಾಟ ಮತ್ತು ಕನ್ನಡಿಗರ ದಶಕಗಳ ಆಶಯಕ್ಕೆ ಇಂದು ನ್ಯಾಯ ಸಿಕ್ಕಿದೆ” ಎಂದು ಸಂತಸ ಹಂಚಿಕೊಂಡರು.

ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ ಪಾಲಿಕೆ ಸೂಪರ್‌ಸೀಡ್ (ಅಮಾನತು) ಆಗುವ ಭೀತಿಯಲ್ಲಿತ್ತು. ಕೊನೆಗೂ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿಯದೆ, ಕಾನೂನುಬದ್ಧವಾಗಿ ಕನ್ನಡದ ಪರ ನಿರ್ಣಯ ಕೈಗೊಳ್ಳುವ ಮೂಲಕ ಪಾಲಿಕೆ ಆಡಳಿತ ಮಂಡಳಿ ವಿವಾದಕ್ಕೆ ಸುಖಾಂತ್ಯ ಹಾಡಿದೆ. ಈ ಮೂಲಕ ಕುಂದಾನಗರಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಮತ್ತೊಮ್ಮೆ ಅಧಿಕೃತವಾಗಿ ಸಾಬೀತಾಗಿದೆ.


Spread the love

About Laxminews 24x7

Check Also

ಬರ ಪರಿಹಾರ ನೀಡಿಲ್ಲ, ಬೇಡಿಕೆ ಈಡೇರಿಸಿಲ್ಲ; ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್. ಅಶೋಕ್

Spread the loveಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಪ್ರತಿಪಕ್ಷ ಬಿಜೆಪಿ  ಇಟ್ಟಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ಬದಲಾಗಿ ರೈತರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ