ನವದೆಹಲಿ: ವಿಶ್ವದ ಎಲ್ಲೆಡೆ ಆಡಳಿತ ವಿರೋಧಿ ಅಲೆ ಇದೆ, ಆದರೆ ಭಾರತದಲ್ಲಿ ಬಿಜೆಪಿಗೆ ದಿಢೀರ್ ಆಡಳಿತ ವಿರೋಧಿ ಅಲೆ ಕಾಣಿಸ್ತಿಲ್ಲ ಯಾಕೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರು ಬಾಂಗ್ಲಾದೇಶ ಯುದ್ಧವನ್ನು ಗೆದ್ದು ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಆದರೂ ಒಂದೆರಡು ವರ್ಷಗಳಲ್ಲಿ ಅವರ ವಿರುದ್ಧ ಬೃಹತ್ ಪ್ರಮಾಣದ ಆಡಳಿತ ವಿರೋಧಿಅಲೆ ಸೃಷ್ಟಿಯಾಯಿತು. ಇದು ಪ್ರಾದೇಶಿಕ ಅಥವಾ ರಾಷ್ಟ್ರೀಯ ಪಕ್ಷವಾಗಿರಲಿ, ಪ್ರತಿಯೊಂದು ಪಕ್ಷಕ್ಕೂ ಸಂಭವಿಸುತ್ತದೆ. ಆದರೆ ಯಾವುದೋ ಕಾರಣದಿಂದ ಇದು ನರೇಂದ್ರ ಮೋದಿ ಅಮಿತ್ ಶಾ ಅಥವಾ ಬಿಜೆಪಿಗೆ ಮಾತ್ರ ಅನ್ವಯವಾಗುತ್ತಿಲ್ಲ ಎಂದು ಆರೋಪಿಸಿದರು.
ಆಡಳಿತ ವಿರೋಧಿ ಅಲೆಯು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಅನ್ವಯವಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಈ ದೇಶದಲ್ಲಿ ಪ್ರತಿಯೊಬ್ಬ ನಾಯಕನಿಗೂ, ಕಾಂಗ್ರೆಸ್ಗೂ, ಪ್ರಾದೇಶಿಕ ಪಕ್ಷಗಳಿಗೂ ಇದು ಅನ್ವಯವಾಗುತ್ತದೆ. ಆದರೆ ಯಾವುದೋ ನಿಗೂಢ ಕಾರಣದಿಂದ ಇದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಥವಾ ಬಿಜೆಪಿಗೆ ಮಾತ್ರ ಅನ್ವಯವಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು
ಹರಿಯಾಣದಲ್ಲಿ 50 ವರ್ಷಗಳಿಂದ ಅಧಿಕಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬದಲಾಗುತ್ತಲೇ ಇತ್ತು. ಆದರೆ ದಿಢೀರನೆ ಆಡಳಿತ ವಿರೋಧಿ ಅಲೆ ಮಾಯವಾಗಿಬಿಡುತ್ತದೆ. ಮಹಾರಾಷ್ಟ್ರದಲ್ಲೂ ಅಧಿಕಾರ ಬದಲಾಗುತ್ತಿತ್ತು. ಅಲ್ಲಿಯೂ ಇದ್ದಕ್ಕಿದ್ದಂತೆ ಅದು ಮಾಯವಾಗುತ್ತದೆ. ಉತ್ತರ ಪ್ರದೇಶದಲ್ಲೂ ಅಧಿಕಾರ ಬದಲಾಗುತ್ತಿತ್ತು. ಕೆಲವೊಮ್ಮೆ ಸಮಾಜವಾದಿ ಪಕ್ಷ, ಕೆಲವೊಮ್ಮೆ ಬಿಎಸ್ಪಿ, ಆದರೆ ಅಲ್ಲೂ ಅದು ಮಾಯವಾಗುತ್ತದೆ. ಮಧ್ಯಪ್ರದೇಶದಲ್ಲೂ ಮಾಯವಾಗುತ್ತದೆ, ಗುಜರಾತ್ನಲ್ಲೂ ಮಾಯವಾಗುತ್ತದೆ. ಇದು ನಮಗೆ ಅತ್ಯಂತ ಮೂಲಭೂತವಾದ ಪ್ರಶ್ನೆಯಾಗಿದೆ. ಒಬ್ಬ ವ್ಯಕ್ತಿಯ ಜನಪ್ರಿಯತೆಯನ್ನು, ಸರ್ಕಾರದ ಸಾಧನೆ-ಕಾರ್ಯವೈಖರಿಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ ಈ ಆಡಳಿತ ವಿರೋಧಿ ಅಲೆ ಹೇಗೆ ಮಾಯವಾಗುತ್ತದೆ ಎಂಬುದನ್ನು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಸದ್ದಾಂ ಹುಸೇನ್ ಆಳ್ವಿಕೆಯ ಇರಾಕ್ನಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಉತ್ತರ ಕೊರಿಯಾದಲ್ಲಿ ಅದು ಅಸ್ತಿತ್ವದಲ್ಲೇ ಇಲ್ಲ. ಆದರೆ ಈ ಇಡೀ ವಿಶ್ವದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದಿರುವ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವೇ ಇಲ್ಲ. ಚುನಾವಣಾ ಆಯೋಗದಿಂದ ರಕ್ಷಿಸಲ್ಪಡಬೇಕಾದ ಮತದಿಂದಲೇ ನಮ್ಮ ಸಂವಿಧಾನಕ್ಕೆ ಶಕ್ತಿ ಬರುತ್ತದೆ. ಸಂವಿಧಾನದಿಂದ ನಮ್ಮ ಕಾನೂನುಗಳು ರೂಪಿಸಲ್ಪಡುತ್ತವೆ, ಮತ್ತು ನಮ್ಮ ಕಾನೂನುಗಳಿಂದ ನಮ್ಮ ಸಂಸ್ಥೆಗಳು ಉದ್ಭವಿಸುತ್ತವೆ. ಇದೊಂದು ಸರಪಳಿ. ಒಂದು ವೇಳೆ ಮತವೇ ನಾಶವಾದರೆ, ನಮ್ಮ ಸಂವಿಧಾನವೇ ನಾಶವಾದಂತೆ. ನಮ್ಮ ಸಂವಿಧಾನವೇ ನಾಶವಾದರೆ, ನಮ್ಮ ಕಾನೂನುಗಳು ಕಾನೂನುಬಾಹಿರವಾಗುತ್ತವೆ. ನಮ್ಮ ಕಾನೂನುಗಳೇ ಕಾನೂನುಬಾಹಿರವಾದರೆ, ನಮ್ಮ ಸಾಂವಿಧಾನಿಕ ಸಂಸ್ಥೆಗಳು ಅರ್ಥಹೀನವಾಗುತ್ತವೆ ಎಂದು ಹೇಳಿದರು.
ಇದು ಕೇವಲ ಮತದ ಮೇಲಿನ ದಾಳಿಯಷ್ಟೇ ಅಲ್ಲ. ಇದು ಪ್ರತಿಯೊಬ್ಬ ಭಾರತೀಯ ವ್ಯಕ್ತಿಯ ಚಿಂತನೆ, ಮೂಲಭೂತ ಚೌಕಟ್ಟು ಮತ್ತು ಅಭಿವ್ಯಕ್ತಿಯ ಮೇಲೆಯೇ ನಡೆದಿರುವ ದಾಳಿ. ಮತದ ವಿಚಾರದಲ್ಲಿ ಗಂಭೀರ ಸಮಸ್ಯೆಯಿದೆ ಎಂಬುದನ್ನು ನಾವು ಪದೇ ಪದೇ ಹೇಳುತ್ತಲೇ ಬಂದಿದ್ದೇವೆ.. ದೇಶದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗವೇ ಕಾರಣ. ಬಿಜೆಪಿ ಗೆಲುವಿಗೆ ಸಹಕಾರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ನೀವು ದೇಶದ ಚುನಾವಣಾ ವ್ಯವಸ್ಥೆಯ ಮೇಲೆಯೇ ನೇರ ಆಕ್ರಮಣ ಮಾಡಿದ್ದೀರಿ ಎಂದು ರಾಹುಲ್ ಕಿಡಿಕಾರಿದರು.
Laxmi News 24×7