Breaking News

ಪ್ರತಿ ಎಕರೆಗೆ 50 ಸಾವಿರ ರೂ. ಸಾಲ

Spread the love

ಬೆಳಗಾವಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲವನ್ನು 3,300 ಕೋಟಿ ರೂ.ದಿಂದ 3,727 ಕೋಟಿ ರೂ.ವರೆಗೆ ಏರಿಕೆ ಮಾಡಲಾಗಿದೆ ಎಂದು ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕಿನ 105ನೇ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಬೆಳೆ ಸಾಲದ ಮಿತಿಯನ್ನು ಪ್ರತಿ ಎಕರೆಗೆ 40 ಸಾವಿರದಿಂದ 50 ಸಾವಿರ ರೂ.ಗೆ ಹೆಚ್ಚಿಸಲಾಗಿದ್ದು, ರೈತರಿಗೆ 700 ಕೋಟಿ ರೂ. ಹೆಚ್ಚುವರಿ ಸಾಲ ದೊರೆಯಲಿದೆ. ಟ್ರ್ಯಾಕ್ಟರ್, ಹೈನುಗಾರಿಕೆ ಹಾಗೂ ಪೈಪ್‌ಲೈನ್ ಸಾಲಗಳ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಯನ್ನು 2.82 ಲಕ್ಷ ಸದಸ್ಯರಿಗೆ ವಿಸ್ತರಿಸಲಾಗಿದೆ ಎಂದರು.

ತಿಂಗಳಲ್ಲಿ ಠೇವಣಿ 616 ಕೋಟಿ ರೂ. ಹೆಚ್ಚಳವಾಗಿದ್ದು, 6,703 ಕೋಟಿ ರೂ.ಗೆ ತಲುಪಿದೆ. ದುಡಿಯುವ ಬಂಡವಾಳ 9,776 ಕೋಟಿ ರೂ.ಗೆ ಏರಿಕೆಯಾಗಿದ್ದು, ಸಾಲ ಮರುಪಾವತಿ ಶೇ.99.78ರಷ್ಟಿದೆ. ಮುಂಬರುವ ದಿನಗಳಲ್ಲಿ ಠೇವಣಿ ಪ್ರಮಾಣ ಹೆಚ್ಚಳ ಜತೆಗೆ ರೈತರಿಗೆ ಸಾಲ ಸೌಲಭ್ಯ ಹೆಚ್ಚಿಸಲಾಗುವುದು. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರೈತರ ಹಿತ ಕಾಯಲು ಬದ್ಧ: ಈ ಸಂದರ್ಭದಲ್ಲಿ ಮಾತನಾಡಿದ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ, ಸಕ್ಕರೆ ಕಾರ್ಖಾನೆಗಳು ಉಳಿದರೆ ಮಾತ್ರ ಕಬ್ಬು ಬೆಳೆಗಾರರ ಹಿತ ಕಾಪಾಡಲು ಸಾಧ್ಯ. ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವ ವಿಚಾರದಲ್ಲಿ ಸಾಧಕ-ಬಾಧಕ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 50 ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ ಒಂದು ಕಾರ್ಖಾನೆ ಮುಚ್ಚಿದರೂ ರೈತರು, ಕಾರ್ಮಿಕ ಕುಟುಂಬಗಳು, ವಾಹನ ಮಾಲೀಕರಿಗೆ ಸಮಸ್ಯೆ ಆಗಲಿದೆ. ಬ್ಯಾಂಕ್ ಕುರಿತು ಆರೋಪಗಳು ಅಥವಾ ಮಾಧ್ಯಮಗಳಲ್ಲಿ ವರದಿಗಳು ಬಂದಾಗ ವಾಸ್ತವಾಂಶ ಪರಿಶೀಲಿಸಿ ಅಭಿಪ್ರಾಯ ಮಂಡಿಸಬೇಕು. ಸುಳ್ಳು ಸುದ್ದಿ, ಅಪಪ್ರಚಾರಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ರೈತರ ಹಿತ ಕಾಯಲು ನಾವೆಲ್ಲ ಬದ್ಧರಾಗಿದ್ದೇವೆ ಎಂದು ಹೇಳಿದರು.

ನಿರ್ದೇಶಕರಾದ ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಗಣೇಶ ಹುಕ್ಕೇರಿ, ವಿರೂಪಾಕ್ಷ ಮಾಮನಿ, ಮಲ್ಲಣ್ಣ ಯಾದವಾಡ, ನಾನಾಸಾಹೇಬ ಪಾಟೀಲ, ಅಮರನಾಥ ಜಾರಕಿಹೊಳಿ, ಬ್ಯಾಂಕಿಂಗ್ ತಜ್ಞ ನಿರ್ದೇಶಕ ರಾಜೇಂದ್ರ ಪಾಟೀಲ, ಪ್ರಭಾರ ಸಿಇಒ ಎನ್.ಜಿ.ಕಲಾವಂತ ಇತರರಿದ್ದರು.

134 ಹುದ್ದೆಗಳ ಭರ್ತಿಗೆ ಹೊಸ ಪ್ರಸ್ತಾವನೆ

ಬಿಡಿಸಿಸಿ ಬ್ಯಾಂಕಿನಲ್ಲಿ ಖಾಲಿ ಇರುವ 134 ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮತಿ ದೊರೆತ ಬಳಿಕ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಕೆಲ ಲೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಆ ಪ್ರಕ್ರಿಯೆ ರದ್ದುಪಡಿಸಿತ್ತು. ಇದೀಗ 110 ಗುಮಾಸ್ತರರು, 23 ಪ್ಯೂವುನ್‌ಗಳು ಹಾಗೂ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ 134 ಹುದ್ದೆ ನೇಮಕಾತಿಗೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ 21 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ಪ್ರಕ್ರಿಯೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಿ ಹೊಸದಾಗಿ ಅರ್ಜಿ ಪಡೆಯಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ