ನವದೆಹಲಿ: ಭಾರತದ ಆತಿಥ್ಯದಲ್ಲಿ ದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದ್ದು, ಜಾಗತಿಕ ರಾಜಕೀಯ, ಆರ್ಥಿಕತೆ, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಇಂಧನ ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯ ಕೇಂದ್ರವಾಗಿವೆ. ಹಲವು ಜಾಗತಿಕ ನಾಯಕರ ಜೊತೆಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದು ಇನ್ನೇನು ಕೆಲವೇ ಹೊತ್ತಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ದ್ವಿಪಕ್ಷೀಯ ಭೇಟಿ. ಜಿನ್‌ಪಿಂಗ್ 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ್ದು, ಉಭಯ ನಾಯಕರ ಮಾತುಕತೆಯ ಮೇಲೆ ಜಾಗತಿಕ ಗಮನ ನೆಟ್ಟಿದೆ.
* ಗಡಿ, ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ವೀಸಾ ಸೇವೆಗಳ ಬಗ್ಗೆ ಚರ್ಚೆ
* ಮಿಲಿಟರಿ ಮತ್ತು ರಾಜತಾಂತ್ರಿಕ ಸಂವಾದ ಬಲಪಡಿಸುವುದು
* ಭಾರತೀಯ ಕಂಪನಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರವೇಶ
* ಭಾರತದ ವ್ಯಾಪಾರ ಕೊರತೆ ಕಡಿಮೆ ಮಾಡುವುದು
* ಚೀನಾಕ್ಕೆ ಭಾರತದ ರಫ್ತು ಹೆಚ್ಚಳ, ಯಂತ್ರೋಪಕರಣಗಳು, ತಂತ್ರಜ್ಞಾನ ಪೂರೈಕೆ ಸುಗಮಗೊಳಿಸುವುದು
* ಚೀನಾದ ಹೂಡಿಕೆಗೆ ವಿಶ್ವಾಸಾರ್ಹ ನಿಯಮಗಳನ್ನ ಸ್ಥಾಪಿಸುವುದರ ಬಗ್ಗೆ ಚರ್ಚೆ ನಡೆಯಲಿದೆ.
ಬ್ರಿಕ್ಸ್ ಸಭೆಗೂ ಮುನ್ನ ಮಹತ್ವದ ನಿರ್ಧಾರ ಘೋಷಿಸಿದ ಚೀನಾ
ಈ ನಡುವೆ ಬ್ರಿಕ್ಸ್ ಸಭೆಯಲ್ಲಿ ಭಾಗಿಯಾಗುವ ಮುನ್ನ ಚೀಜಾ ಮಹತ್ವದ ನಿರ್ಧಾರ ಘೋಷಿಸಿದೆ. 6 ವರ್ಷಗಳ ನಂತರ ಭಾರತಕ್ಕೆ ಏರ್ಲೈನ್ಸ್ ಸೇವೆಗಳ ಪುನಾರಂಭ ಘೋಷಣೆ ಮಾಡಲಾಗಿದೆ. ಚೀನಾ ಸದರ್ನ್ ಏರ್ಲೈನ್ಸ್ ಸೇವೆ ಪುನಾರಂಭವಾಗಿದ್ದು ಗುವಾಂಗ್ಝೌ – ನವದೆಹಲಿ ಸೇವೆ ಪುನಾರಂಭವಾಗಲಿದೆ.
ಜಾಗತಿಕ ನಾಯಕರ ಜೊತೆಗೆ ಮೋದಿ ಸಭೆ
ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿದ ಜಾಗತಿಕ ನಾಯಕರ ಜೊತೆಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಜೊತೆಗೆ ಸರಣಿ ಸಭೆ ನಡೆಸಿದರು.
ಇದರ ಬಳಿಕ ಭಾರತ್ ಮಂಟಪದಲ್ಲಿ ಇಂದು ಸಮಗ್ರ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯನ್ನು ಬಲಪಡಿಸುವುದು ಎಂಬ ವಿಷಯದ ಮೇಲೆ ಸದಸ್ಯ ರಾಷ್ಟ್ರಗಳ ನಾಯಕರ ಕ್ಲೋಸ್ ಡೋರ್ ಮೀಟಿಂಗ್ ನಡೆಯಿತು. ನಂತರ ಭಾರತ ಆಯೋಜಿಸಿರುವ ಇಂಡಿಯಾ ಇನೋವೇಟ್ಸ್ ಪ್ರದರ್ಶನಕ್ಕೆ ನಾಯಕರು ಭೇಟಿ ನೀಡಿದರು. ನಂತರ ನಾಯಕರ ಅಧಿಕೃತ ಗ್ರೂಪ್ ಫೋಟೋ ನೀಡಿ, ಸಸಿ ನೆಟ್ಟರು.
Laxmi News 24×7