ಟೆಹ್ರಾನ್: ನಿಜವಾದ ಶತ್ರುಗಳನ್ನು ಗುರುತಿಸಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕರೆ ನೀಡಿದ್ದಾರೆ.
ಇರಾನ್, ಅಮೆರಿಕ, ಇಸ್ರೇಲ್ ನಡುವಿನ ಯುದ್ಧ ಪ್ರಾರಂಭದ ಆರು ತಿಂಗಳ ನಂತರ ಅವರು ಈ ಲಿಖಿತ ಸಂದೇಶ ಹಂಚಿಕೊಂಡಿದ್ದಾರೆ. ಈ ಪ್ರದೇಶದ ಮುಸ್ಲಿಂ ರಾಷ್ಟ್ರಗಳು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಒಗ್ಗೂಡುವಂತೆ ಕರೆ ನೀಡಿದ್ದಾರೆ.
ಏಕತೆ, ಸ್ನೇಹ ಮತ್ತು ಸಹಕಾರ ಇಸ್ಲಾಮಿಕ್ ರಾಷ್ಟ್ರಗಳ ಸಮಸ್ಯೆಗಳಿಗೆ ಪರಿಹಾರವಾಗಿದೆ. ಯಾರಾದರೂ, ಯಾವುದೇ ಸ್ಥಾನದಲ್ಲಿದ್ದರೂ, ಉದ್ದೇಶ ಪೂರ್ವಕವಾಗಿಯೋ ಅಥವಾ ಉದ್ದೇಶಪೂರ್ವಕ ಅಲ್ಲದೆಯೋ ಮುಸ್ಲಿಮರಲ್ಲಿ ವಿಭಜನೆಗೆ ಕಾರಣವಾಗುವ, ಮುಸ್ಲಿಂ ಸಮುದಾಯದಲ್ಲಿ ಸಂಘರ್ಷವನ್ನು ಸೃಷ್ಟಿಸುವ ಕೆಲಸ ಮಾಡಿದರೆ ಅವರು ಇಸ್ಲಾಂನ ಶತ್ರುಗಳ ಉದ್ದೇಶವನ್ನು ಪೂರೈಸಿದ್ದಾರೆ ಎಂದರ್ಥ ಎಂದು ಅವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ.
ನಿಮ್ಮ ನಿಜವಾದ ಶತ್ರುವನ್ನು ಗುರುತಿಸಿ, ಅವರ ಯೋಜನೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಅದನ್ನು ಎದುರಿಸಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ಅವರು ಕರೆ ನೀಡಿದ್ದಾರೆ.
ಯುದ್ಧದ ಸಮಯದಲ್ಲಿ, ಇರಾನ್ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತದ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿತು. ಅಂದಿನಿಂದ ಆ ರಾಷ್ಟ್ರಗಳೊಂದಿಗಿನ ಸಂಬಂಧಗಳು ಹದಗೆಟ್ಟಿವೆ.
ಆಯತೊಲ್ಲಾ ಅಲಿ ಖಮೇನಿ ಹತ್ಯೆ ನಂತರ ಈ ವರ್ಷ ಮಾರ್ಚ್‌ನಲ್ಲಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನ ಇರಾನ್‌ನ ಹೊಸ ಸರ್ವೋಚ್ಛ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಇನ್ನೂ ಅವರ ಆರೋಗ್ಯದ ಬಗ್ಗೆ ಹಲವು ದಿನಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಇರಾನ್‌ನ ಸರ್ಕಾರಿ ನಿಯಂತ್ರಿತ ಮೆಹರ್ ಸುದ್ದಿ ಸಂಸ್ಥೆ ಮೊಜ್ತಬಾ ಖಮೇನಿ ಅವರ ದಿನಾಂಕವಿಲ್ಲದ 12 ಸೆಕೆಂಡ್‌ಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.
Laxmi News 24×7