Breaking News

ಜಮೀನಿಗಾಗಿ 20 ವರ್ಷಗಳಿಂದ ಅಲೆದಾಟ – ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದ ಯೋಧನಿಂದ ಆತ್ಮಹತ್ಯೆಗೆ ಯತ್ನ

Spread the love

ಚಿಕ್ಕಬಳ್ಳಾಪುರ: ಜಮೀನಿಗಾಗಿ 20 ವರ್ಷಗಳ ಕಾಲ ಅಲೆದಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಮಾಜಿ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ರಾಯಪಲ್ಲಿ ನಿವಾಸಿ ಮಾಜಿ ಸೈನಿಕ ಶಿವಾನಂದ ರೆಡ್ಡಿ ವಿಷ ಸೇವಿಸಿದ ಮಾಜಿ ಯೋಧ. 1987ರಲ್ಲಿ ಭಾರತೀಯ ಸೇನೆ ಸೇರಿದ್ದ ಇವರು, 1999ರ ಕಾರ್ಗಿಲ್ ಯುದ್ಧದ ವೇಳೆ ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗಂಭೀರವಾಗಿ ಗಾಯಗೊಂಡಿದ್ದರು. ಕಾಲಿಗೆ ಫ್ರ‍್ಯಾಕ್ಚರ್ ಆಗಿ ವಿಕಲಚೇತನರಾಗಿ ಕೊನೆಗೆ 2004ರಲ್ಲಿ ನಿವೃತ್ತರಾಗಿದ್ದರು.

ಸೇನೆಯಲ್ಲಿದ್ದಾಗಲೇ ಅವರಿಗೆ ಸರ್ಕಾರದ ನಿಯಮದಡಿ ಕೃಷಿ ಜಮೀನು ಮಂಜೂರು ಮಾಡಲು ಸೇನೆಯ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ನಿವೃತ್ತಿಯಾದ ನಂತರ ಆರಂಭವಾದ ಸರ್ಕಾರಿ ಕಚೇರಿಗಳ ಅಲೆದಾಟ ಇಂದಿಗೂ ಮುಗಿದಿಲ್ಲ. 2004ರಿಂದ ಇಲ್ಲಿಯವರೆಗೂ ನಿರಂತರವಾಗಿ ಚಿಂತಾಮಣಿ ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಕಂದಾಯ ಇಲಾಖೆ ಸೇರಿದಂತೆ ಹಲವು ಕಚೇರಿಗಳಿಗೆ ಅಲೆದಾಡಿದರೂ, ಸರ್ಕಾರಿ ಜಮೀನು ಸಿಕ್ಕಿಲ್ಲ. ಇದ್ರಿಂದ ಕೆಲವು ದಿನಗಳ ಹಿಂದೆ ಚಿಂತಾಮಣಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದ್ದರು.

ಹೋರಾಟದ ಬಳಿಕ ಚಿಂತಾಮಣಿ ತಹಶಿಲ್ದಾರ್ ಕಚೇರಿ ಅಧಿಕಾರಿಗಳು ಜಮೀನು ಗುರುತಿಸಿದ್ದರು. ಆದರೆ ಜಮೀನು ಸರ್ವೆ ನಡೆಸಿ ದಾಖಲೆ ನೀಡಲು ಕೆಲವು ತಿಂಗಳ ಹಿಂದೆ ಅಧಿಕಾರಿಗಳು 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 5 ಲಕ್ಷ ರೂ. ನೀಡುವುದಾಗಿ ಹೇಳಿ, ಶಿವಾನಂದ ರೆಡ್ಡಿಯವರು ಲೋಕಾಯುಕ್ತ ಪೊಲೀಸರಿಗೆ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದರು. ಇದರಿಂದ ಇಬ್ಬರು ಅಧಿಕಾರಿಗಳು ಅಮಾನತಾಗಿದ್ದರು.

ಇದೇ ದ್ವೇಷದಿಂದ ಈಗ ಸಿಬ್ಬಂದಿ, ಅಧಿಕಾರಿಗಳು, ಶಿವಾನಂದರೆಡ್ಡಿ ಅವರಿಗೆ ತಾಲೂಕಿನಲ್ಲಿ ಸರ್ಕಾರಿ ಜಮೀನು ಇಲ್ಲವೆಂದು ಎನ್.ಒ.ಸಿ ನೀಡಿ ಅನ್ಯಾಯ ಮಾಡಲು ಹೊರಟಿರುವ ಆರೋಪ ಕೇಳಿ ಬಂದಿದೆ. ಇದರಿಂದ ನೊಂದ ಮಾಜಿ ಸೈನಿಕ ಇಂದು (ಆ.28) ತಾಲೂಕು ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ದೇಶಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮಾಜಿ ಯೋಧನೊಬ್ಬ, ತನ್ನ ಹಕ್ಕಿನ ಜಮೀನು ಪಡೆಯಲು 20 ವರ್ಷಗಳ ಕಾಲ ಸರ್ಕಾರಿ ಕಚೇರಿಗಳ ಅಲೆದಾಡಬೇಕಾಯಿತು. ಲಂಚದ ವಿರುದ್ಧ ಹೋರಾಡಿದರೂ, ಧರಣಿ ನಡೆಸಿದರೂ, ಪಾದಯಾತ್ರೆ ಮಾಡಿದರೂ, ಉಪವಾಸ ಸತ್ಯಾಗ್ರಹ ಮಾಡಿದರೂ ನ್ಯಾಯ ಸಿಗಲಿಲ್ಲ. ಈಗ ವಿಷ ಸೇವಿಸಿ ಆಸ್ಪತ್ರೆ ಸೇರಿರುವುದು ನಿಜಕ್ಕೂ ದುರಾದೃಷ್ಟ ಸಂಗತಿ.


Spread the love

About Laxminews 24x7

Check Also

ರಾತ್ರಿ ಹೊತ್ತು ಗ್ರಾಮಕ್ಕೆ ನುಗ್ಗಿ ಕುರಿ, ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ

Spread the loveಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ