ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಿವಮೊಗ್ಗದ ) ಆರ್ಎಂಎಲ್ ನಗರದಲ್ಲಿ ನಿರ್ಮಿಸುತ್ತಿದ್ದ ಕಟೌಟ್ ಒಂದರ ಮೇಲೆ ನಿಂತು ಪ್ಯಾಲೆಸ್ತೀನ್ ಧ್ವಜ ) ಹಾರಿಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ಶಿವಮೊಗ್ಗ ನಗರದ ನಿಹಾಲ್, ಉಮರ್ ಹಾಗೂ ಅಬ್ರಹಾರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ನಿಹಾಲ್ನನ್ನ ವಶಕ್ಕೆ ಪಡೆದು, ವಿಚಾರಣೆ ಕೂಡ ನಡೆಸಿದ್ದಾರೆ. ಆ.25ರಂದು ಮಧ್ಯಾಹ್ನ ಆರ್ಎಂಎಲ್ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಲಭಿಸಿದ ಖಚಿತ ಮಾಹಿತಿ ಆಧರಿಸಿ ಇನ್ಸ್ಟಾಗ್ರಾಂ ಐಡಿ ಒಂದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಪ್ಯಾಲೆಸ್ತೀನ್ ಬಾವುಟ ಮತ್ತು ಲವ್ ಸಿಂಬಲ್ ಬಳಸಿ ಶಿವಮೊಗ್ಗ ನಗರ ಭಾರತೀಯ ಸಭಾ ಭವನದ ಬಳಿ ನಿರ್ಮಿಸಲಾಗುತ್ತಿದ್ದ ಕಟೌಟ್ ಮೇಲೆ ಮೂವರು ವ್ಯಕ್ತಿಗಳು ಪ್ಯಾಲೆಸ್ತೀನ್ ದೇಶದ ಧ್ವಜ ಹಾರಿಸುತ್ತಿರುವ 14 ಸೆಕೆಂಡುಗಳ ವೀಡಿಯೋ ಪೋಸ್ಟ್ ಮಾಡಲಾಗಿತ್ತು.
ಘಟನಾ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿದಾಗ, ಆಗಸ್ಟ್ 24ರ ಬೆಳಿಗ್ಗೆ 8 ರಿಂದ 9 ಗಂಟೆಯ ಅವಧಿಯಲ್ಲಿ ಆರ್ಎಂಎಲ್ ನಗರದ ನಿವಾಸಿಗಳಾದ ಮೂವರು ವ್ಯಕ್ತಿಗಳು ಕಟೌಟ್ ಮೇಲೇರಿ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಭಾರತದಲ್ಲಿ ವಾಸವಿದ್ದು ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತೆ ಮತ್ತು ಜನಾಂಗೀಯ, ಕೋಮುಗಳ ನಡುವೆ ವೈಮನಸ್ಸು ಹಾಗೂ ದ್ವೇಷ ಭಾವನೆ ಹುಟ್ಟುಹಾಕಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಉದ್ದೇಶದಿಂದ ಈ ವಿಡಿಯೋ ಹರಿಬಿಡಲಾಗಿದೆ ಎಂದು ದೊಡ್ಡಪೇಟೆ ಠಾಣೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ದೊಡ್ಡಪೇಟೆ ಠಾಣೆ ಪೊಲೀಸರು, ಇದೀಗ ಓರ್ವನನ್ನ ವಶಕ್ಕೆ ಪಡೆದು, ವಿಚಾರಣೆ ಕೂಡ ಆರಂಭಿಸಿದ್ದಾರೆ.
Laxmi News 24×7