ಹೈದರಾಬಾದ್: ಶಾಲೆಯಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ನ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ.
ಈ ತೀರ್ಪನ್ನು “ಇಸ್ಲಾಂ ಮೇಲಿನ ದಾಳಿ” ಎಂದು ಕರೆದಿರುವ ಅವರು, ಇಸ್ಲಾಂಧರ್ಮದಲ್ಲಿ ಯಾವುದು ಅತ್ಯಗತ್ಯ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ಯಾರು ಎಂದು ಪ್ರಶ್ನಿಸಿದ್ದಾರೆ.
“ಇದು ನಮ್ಮ ಧರ್ಮ, ಇದರಲ್ಲಿ ಯಾವುದು ಅತ್ಯಗತ್ಯ ಎಂಬುದನ್ನು ನಾವೇ ತೀರ್ಮಾನಿಸುತ್ತೇವೆ. ಅದನ್ನು ನಿರ್ಧರಿಸಲು ನ್ಯಾಯಾಧೀಶರು ಯಾರು? ಇದು ನಮ್ಮ ಧರ್ಮದ ಮೇಲಿನ ನೇರ ದಾಳಿ” ಎಂದು ಓವೈಸಿ ಆಕ್ರೋಶ ಹೊರಹಾಕಿದ್ದಾರೆ.ಧಾರ್ಮಿಕ ಅತ್ಯಗತ್ಯ ಆಚರಣೆಗಳಿಗೆ ಸಂಬಂಧಿಸಿದ ವಿಷಯವನ್ನು ಶಬರಿಮಲೆ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಪರಿಶೀಲಿಸುತ್ತಿರುವಾಗ, ಅಲಹಾಬಾದ್ ಹೈಕೋರ್ಟ್ ಈ ಕುರಿತು ತೀರ್ಪು ನೀಡಬಾರದಿತ್ತು ಎಂದು ಓವೈಸಿ ಹೇಳಿದರು.
ಶಿಸ್ತು ಮತ್ತು ಸಮಾನತೆಯನ್ನು ಕಾಯ್ದುಕೊಳ್ಳಲು ಸಮವಸ್ತ್ರ ನಿಯಮ ಜಾರಿಗೊಳಿಸುವ ಸಂಪೂರ್ಣ ಸ್ವಾಯತ್ತತೆ ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ತಿರಸ್ಕರಿಸಿದ ಓವೈಸಿ, ಏಕರೂಪತೆಯೇ ಸಮಾನತೆಯಲ್ಲ ಎಂದು ಪ್ರತಿಪಾದಿಸಿದರು.
Laxmi News 24×7