ಕಠ್ಮಂಡು: ಉತ್ತರ ನೇಪಾಳದ ರಸುವಾ ಜಿಲ್ಲೆಗೆ ಬೆಳಗ್ಗೆ ಅಪ್ಪಳಿಸಿದ ಭೀಕರ ಪ್ರವಾಹವು ವ್ಯಾಪಕ ವಿನಾಶ ಉಂಟು ಮಾಡಿದೆ. ನದಿಗಳ ಮೇಲೆ ನಿರ್ಮಿಸಲಾದ ಸೇತುವೆಗಳು ಮತ್ತು ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ನೂರಾರು ಮಂದಿ ನಾಪತ್ತೆಯಾಗಿದ್ದು, ಈವರೆಗೂ 100 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ.
ನೇಪಾಳದಲ್ಲಿ ಜಲ ಪ್ರಳಯ ಸಂಭವಿಸಿದೆ. ಟಿಬೆಟ್ ಗಡಿಯ ಬಳಿಯ ನೇಪಾಳದ ರಸುವಾ ಜಿಲ್ಲೆಯಲ್ಲಿ ಬೆಳಗ್ಗೆ ಭೋಟೆ ಕೋಶಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು ಭಾರಿ ಅನಾಹುತ ಸೃಷ್ಠಿಯಾಗಿದೆ. ಪ್ರವಾಹದ ರಭಸಕ್ಕೆ ಗ್ರಾಮಗಳು, ಮಾರುಕಟ್ಟೆ ಪ್ರದೇಶಗಳು, ಸೇತುವೆಗಳು, ರಸ್ತೆಗಳು ಹಾಗೂ ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯ ಕೊಚ್ಚಿಹೋಗಿದ್ದು, ಈವರೆಗೂ ಪ್ರವಾಹದಿಂದ 95 ಮಂದಿ ಮೃತಪಟ್ಟಿದ್ದು ಸಾವು ನೋವುಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಸುಮಾರು 500 ಜನರು ಕಾಣೆಯಾಗಿದ್ದಾರೆ. ಈ ಪೈಕಿ 18 ಶವಗಳನ್ನು ಚಿತಾವಾನ್ ಜಿಲ್ಲೆಯಿಂದ, 16 ಧಡಿಂಗ್‌ನಿಂದ, 11 ಶವಗಳನ್ನು ನುವಕೋಟ್‌ನಿಂದ ಮತ್ತು ಒಂದು ಶವವನ್ನು ರಸುವಾದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಬಾಗ್ಮತಿ ಪ್ರಾಂತ್ಯ ಪೊಲೀಸ್ ಕಚೇರಿಯ ವಕ್ತಾರ ರಾಜೇಂದ್ರ ಪ್ರಸಾದ್ ಧಮಾಲಾ ತಿಳಿಸಿದ್ದಾರೆ.
ರಸುವಾ ಜಿಲ್ಲೆ ಪ್ರವಾಹದಿಂದ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ. ತಿಮುರೆ ಮತ್ತು ಸೈಫ್ರುಬೆಸಿ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಬೆತ್ರಾವತಿ, ಮೈಲುಂಗ್, ಸಲ್ಲೆಟರ್, ಶಾಂತಿಬಜಾರ್, ಪೈರೆಬೆಸಿ, ಖಲ್ತಿ ಬಸ್ತಿ, ಸೋಲೆ, ತ್ರಿಶೂಲಿ ಮತ್ತು ಬತ್ತಾರ್ ಸೇರಿದಂತೆ ನದಿಯುದ್ದಕ್ಕೂ ಇರುವ ಹಲವು ವಸತಿ ಪ್ರದೇಶಗಳು ಪ್ರವಾಹದಿಂದ ಬಾಧಿತವಾಗಿವೆ. ಧಾಡಿಂಗ್ ಜಿಲ್ಲೆಯ ಗಜುರಿಯಲ್ಲಿದ್ದ ಸೇತುವೆಯೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ನೇಪಾಳದ ಟಿಬೆಟ್‌ನೊಂದಿಗಿನ ವ್ಯಾಪಾರ ಮಾರ್ಗದ ಮೇಲೂ ಪ್ರವಾಹ ತೀವ್ರ ಪರಿಣಾಮ ಬೀರಿದೆ. ಚೀನಾದೊಂದಿಗಿನ ಪ್ರಮುಖ ಗಡಿ ದಾಟುವ ಸ್ಥಳವಾದ ರಸುವಾಗಧಿಯಲ್ಲಿ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.
291 ವಿದೇಶಿ ಪ್ರಜೆಗಳು ಸೇರಿ ಒಟ್ಟು 384 ಮಂದಿ ನಾಪತ್ತೆ
ಘಟನೆಯಲ್ಲಿ 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸೇರಿ ಒಟ್ಟು 384 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ಹೇಳಿದೆ. ಈ ಪಟ್ಟಿ ಪ್ರಾಥಮಿಕವಾಗಿದ್ದು, ಟೂರ್ ಸಂಸ್ಥೆಗಳು, ಮಾರ್ಗದರ್ಶಕರು, ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಮಂಡಳಿ ತಿಳಿಸಿದೆ. ಪರಿಶೀಲನೆ ಪೂರ್ಣಗೊಳ್ಳುವವರೆಗೆ ನಾಪತ್ತೆಯಾದವರ ಕುಟುಂಬಗಳು ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮಂಡಳಿ ಮನವಿ ಮಾಡಿದೆ.
ಕೈಲಾಸ ಮಾನಸ ಸರೋವರಕ್ಕೆ ತೆರಳುತ್ತಿದ್ದ ಪ್ರವಾಸಿಗರು ನಾಪತ್ತೆ
ಪ್ರವಾಹದಲ್ಲಿ ನಾಪತ್ತೆಯಾದವರಲ್ಲಿ ಹೆಚ್ಚಿನ ಸಂಖ್ಯೆಯವರು ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಟಿಬೆಟ್‌ಗೆ ತೆರಳುತ್ತಿದ್ದ ಪ್ರವಾಸಿಗರು ಎನ್ನಲಾಗಿದೆ. ಕಠ್ಮಂಡು ಮೂಲದ ಟಚ್ ಕೈಲಾಸ ಟ್ರಾವೆಲ್ಸ್ ಆ್ಯಂಡ್ ಟೂರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಶು ಕುಮಾರ್ ಅಧಿಕಾರಿ ಅವರ ಪ್ರಕಾರ, 93 ನೇಪಾಳಿ ಪ್ರಜೆಗಳು ಸೇರಿದಂತೆ 390 ಮಂದಿ ಬುಧವಾರ ಗಡಿ ದಾಟಲು ನಿರ್ಧರಿಸಿದ್ದರು. ಕೆಲವರನ್ನು ಹೊರತುಪಡಿಸಿ, ಮಧ್ಯಾಹ್ನ 3ರ ವೇಳೆಗೆ ನಾವು ಪ್ರವಾಸಿಗರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ನೇಪಾಳದ ಟ್ರೆಕ್ಕಿಂಗ್ ಏಜೆನ್ಸಿಗಳ ಸಂಘದ ಅಧ್ಯಕ್ಷ ಸಾಗರ್ ಪಾಂಡೆ, ಪ್ರವಾಸಿಗರನ್ನು ಸಂಪರ್ಕಿಸಿ ಅವರ ಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ದಯವಿಟ್ಟು ತಾಳ್ಮೆಯಿಂದಿರಿ.. ನಿಮ್ಮ ರಕ್ಷಣೆ, ಚಿಕಿತ್ಸೆ ನಮ್ಮ ಜವಬ್ದಾರಿ
ಈ ನಡುವೆ ನೇಪಾಳ ಪ್ರಧಾನಿ ಬಾಲೆನ್ ಶಾ ಪ್ರತಿಕ್ರೀಯೆ ನೀಡಿದ್ದು, ದಯವಿಟ್ಟು ತಾಳ್ಮೆಯಿಂದಿರಿ. ನಿಮ್ಮ ರಕ್ಷಣೆ, ಚಿಕಿತ್ಸೆ, ಆಹಾರ ಮತ್ತು ಆಶ್ರಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಇಂತಹ ವಿಪತ್ತಿನ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ. ಈ ನಡುವೆ ನೇಪಾಳ ವಾಯು ಸೇನೆಯ ಸಹಕಾರದಲ್ಲಿ ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದೆ. ಇಂದು ಕೂಡಾ ರಕ್ಷಣಾ ಕಾರ್ಯಚರಣೆ ಮುಂದುವರಿಯಲಿದೆ.
Laxmi News 24×7