Breaking News

ರೇಷ್ಮೆ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿ: ಗೋವಿಂದ ಕಾರಜೋಳ

Spread the love

ಚಿತ್ರದುರ್ಗ: ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಠಿಣ ಶ್ರಮ ಹಾಗೂ ತಾಂತ್ರಿಕ ಸಂಶೋಧನೆಗಳ ಮೂಲಕ ಭಾರತ  ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೇರುವಂತೆ ರೈತರು ಹಾಗೂ ವಿಜ್ಞಾನಿಗಳು ಶ್ರಮಿಸಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ನಗರದ ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ನನ್ನ ರೇಷ್ಮೆ ನನ್ನ ಹೆಮ್ಮೆ’ ಅಭಿಯಾನದಡಿ ರೈತರು ಮತ್ತು ವಿಜ್ಞಾನಿಗಳ ನಡುವಿನ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗದ ಮಾರಗಟ್ಟದಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರ ವಿಸ್ತರಣ ಕೇಂದ್ರವನ್ನು ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. 1982ರಲ್ಲಿ ಪ್ರಾರಂಭವಾದ ಚಿತ್ರದುರ್ಗ ತಾಲೂಕಿನ ಮಾರಗಟ್ಟದಲ್ಲಿರುವ ರೇಷ್ಮೆ ಸಂಶೋಧನಾ ವಿಸ್ತರಣ ಕೇಂದ್ರವು ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಮೂರು ಜಿಲ್ಲೆಗಳ ರೇಷ್ಮೆ ಬೆಳೆಗಾರರ ಅಗತ್ಯತೆಗಳನ್ನು ಪೂರೈಸುತ್ತಿತ್ತು. ಬೆಂಗಳೂರಿನ ಸರ್ಜಾಪುರದ ಬಳಿಯ ಕೊಡತಿಯಿಂದ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನು ಚಿತ್ರದುರ್ಗದ ಮಾರಗಟ್ಟಕ್ಕೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು.

ಚಿತ್ರದುರ್ಗದ ಮಾರಗಟ್ಟದಲ್ಲಿದ್ದ ಸಂಶೋಧನಾ ವಿಸ್ತರಣ ಕೇಂದ್ರವನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಮಾರಘಟ್ಟದ ಈ ಕೇಂದ್ರವು ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಕಾರ್ಯಾರಂಭ ಮಾಡಿದೆ. ಚಿತ್ರದುರ್ಗದ ಈ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರವು 10 ಉಪ-ಘಟಕಗಳ ತಾಂತ್ರಿಕ ಚಟುವಟಿಕೆಗಳನ್ನು ಮತ್ತು ಉತ್ತರ ಕರ್ನಾಟದದಲ್ಲಿ ಕಾರ್ಯನಿರ್ವಹಿಸುತ್ತಿರುವ 03 ಘಟಕಗಳನ್ನು ಅಂದರೆ ರಾಣೇಬೆನ್ನೂರು, ಕೊಪ್ಪಳ ಮತ್ತು ಬೀದರ್‌ನಲ್ಲಿರುವ ಸಂಶೋಧನಾ ವಿಸ್ತರಣ ಕೇಂದ್ರಗಳನ್ನು ಸಮನ್ವಯಗೊಳಿಸುತ್ತದೆ ಎಂದು ನುಡಿದರು.

ಇದರ ಜೊತೆಗೆ ದಕ್ಷಿಣ ಕರ್ನಾಟಕದ ಎರಡು ಘಟಕಗಳಾದ ಮದ್ದೂರು ಮತ್ತು ಮಡಿವಾಳ ಘಟಕಗಳೂ ಸಹ ಚಿತ್ರದುರ್ಗ ಕೇಂದ್ರದ ವ್ಯಾಪ್ತಿಗೆ ಬಳಪಡುತ್ತವೆ. ಇದರ ಜೊತೆಗೆ ಮಹಾರಾಷ್ಟ್ರದ ನಾಲ್ಕು ಮತ್ತು ಮಧ್ಯಪ್ರದೇಶದ ಒಂದು ರೇಷ್ಮೆ ವಿಸ್ತರಣಾ ಕೇಂದ್ರಗಳು ಚಿತ್ರದುರ್ಗದ ಕೇಂದ್ರದ ವ್ಯಾಪ್ತಿಗೆ ಒಳಪಡಲಿವೆ ಎಂದು ಹೇಳಿದರು.

ಸರ್ವಜ್ಞ ಕವಿಯ `ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬ ನುಡಿಯಂತೆ, ರೈತ ಬೆಳೆಯನ್ನು ಬೆಳೆಯದಿದ್ದರೆ ನಮಗೆ ಉಣ್ಣಲು ಅನ್ನವೂ ಇರುವುದಿಲ್ಲ, ಮಾನ ಮುಚ್ಚಲು ಬಟ್ಟೆಯೂ ಸಿಗುವುದಿಲ್ಲ. ಪ್ರತಿಯೊಂದು ರಂಗಕ್ಕೂ ಕೃಷಿಯೇ ಮೂಲಾಧಾರ. ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಭೂಮಿಯನ್ನು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಮಾರಾಟ ಮಾಡದೆ, ಅದನ್ನು ಫಲವತ್ತಾಗಿಸಿ 140 ಕೋಟಿ ದೇಶವಾಸಿಗಳಿಗೆ ಅನ್ನ ನೀಡುವ ಪವಿತ್ರ ಕಾಯಕದಲ್ಲಿ ನಿರತರಾಗಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಯೊಂದು ರಂಗದಲ್ಲೂ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ಒಟ್ಟು 1,42,767 ರೈತರಿಗೆ 713.72 ಕೋಟಿ ರೂ. ನೇರ ಹಣ ವರ್ಗಾವಣೆಯಾಗಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ 3,43,000 ರೈತರು 113 ಕೋಟಿ ರೂ. ಪ್ರೀಮಿಯಂ ವಂತಿಗೆ ಪಾವತಿಸಿದ್ದರು. ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿಯಾಗಿ 722 ಕೋಟಿ ರೂ. ಬೆಳೆ ವಿಮೆ ಪರಿಹಾರ ಧನ ತಲುಪಿದೆ. ಯಾವುದೇ ಅರ್ಹ ರೈತರಿಗೆ ವಿಮೆ ಹಣ ತಲುಪದೇ ಇದ್ದರೆ ಪೂರ್ಣ ವಿವರಗಳನ್ನು ನೀಡಿದರೆ, ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಯಂತ್ರೋಪಕರಣ ಯೋಜನೆಯಡಿ ಜಿಲ್ಲೆಯ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ 47.72 ಕೋಟಿ ರೂ. ವೆಚ್ಚದಲ್ಲಿ 17,306 ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಅಂತೆಯೇ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 94 ಕೋಟಿ ರೂ. ಸಹಾಯಧನದೊಂದಿಗೆ 53,301 ತುಂತುರು ಘಟಕಗಳನ್ನು ನೀಡಲಾಗಿದೆ ಎಂದು ತಿಳಿಸಿದ ಅವರು, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯಲ್ಲಿ 2.65 ಲಕ್ಷಕ್ಕೂ ಹೆಚ್ಚು ಜನರು ಸಾಲ ಸೌಲಭ್ಯ ಪಡೆದಿದ್ದಾರೆ ಎಂದರು.

ಜಿಲ್ಲೆಯಲ್ಲಿ ಒಟ್ಟು 3,891 ರೂ. ಕೋಟಿಯಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಇದರೊಂದಿಗೆ ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯ 5,800 ಜನ ಬೀದಿಬದಿ ವ್ಯಾಪಾರಿಗಳಿಗೆ 14.90 ಕೋಟಿ ರೂ. ನೆರವು ಒದಗಿಸಲಾಗಿದೆ. 2025-26ನೇ ಸಾಲಿನಲ್ಲಿ ಜಿಲ್ಲೆಯ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 180 ರೈತರಿಗೆ ಅಗತ್ಯ ಉಪಕರಣ ಹಾಗೂ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ರೈತರು, ಕೃಷಿ ಕಾರ್ಮಿಕರು ಹಾಗೂ ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಬೋಜಣ್ಣ, ಕೇಂದ್ರ ರೇಷ್ಮೆ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ವೈ.ಶ್ರೀನಿವಾಸಲು, ಪ್ರಶಾಂತ್, ರೇಷ್ಮೆ ಸಹಾಯಕ ನಿರ್ದೇಶಕಿ ಉಷಾ ಸೇರಿದಂತೆ ರೇಷ್ಮೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೇಷ್ಮೆ ಬೆಳೆಗಾರ ರೈತರು ಇದ್ದರು.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ