ಬೆಳಗಾವಿ : ಭಾರತವನ್ನು ಕ್ಷಯರೋಗ (ಟಿಬಿ) ಮುಕ್ತ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿಯಾನ ಅತ್ಯಂತ ಶ್ಲಾಘನೀಯವಾಗಿದೆ. ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದು 26 ಕರ್ನಾಟಕ ಎನ್ಸಿಸಿ ಬಟಾಲಿಯನ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನೀಲ್ ದಾಗರ್ ಹೇಳಿದರು.
ಜಾಧವ ನಗರದಲ್ಲಿನ 26 ಕರ್ನಾಟಕ ಎನ್ಸಿಸಿ ಬಟಾಲಿಯನ್ನಲ್ಲಿ ನಡೆಯುತ್ತಿರುವ ವಾರ್ಷಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಎನ್ಸಿಸಿ ಕೆಡೆಟ್ಗಳಿಗೆ ಭಾನುವಾರ ಟಿಬಿ ಮುಕ್ತ ಭಾರತ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಕ್ಷಯರೋಗ ಕಾಣಿಸಿಕೊಂಡರೆ ಬದುಕುಳಿಯುವುದು ಕಷ್ಟ ಎಂಬ ಆತಂಕವಿತ್ತು. ಇಂದು ವೈದ್ಯಕೀಯ ಕ್ಷೇತ್ರ ಮತ್ತು ಆರೋಗ್ಯ ಇಲಾಖೆಯ ನಿರಂತರ ಪ್ರಯತ್ನಗಳಿಂದ ಈ ರೋಗ ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರಲ್ಲೂ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಈ ಕುರಿತು ಭಯ ಅಥವಾ ಆತಂಕ ಪಡುವ ಅಗತ್ಯವಿಲ್ಲ. ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದರ ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಮಹತ್ವ ಎಂದು ತಿಳಿಸಿದರು.
ಆ.17ರಿಂದ ನಡೆದಿರುವ ಈ ವಾರ್ಷಿಕ ಎನ್ಸಿಸಿ ಶಿಬಿರದಲ್ಲಿ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ಹಾಗೂ ಬೆಳಗಾವಿ ತಾಲೂಕಿನ 553 ಕೆಡೆಟ್ ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ಪ್ರತಿಜ್ಞಾವಿಧಿಯಲ್ಲಿ ಬಟಾಲಿಯನ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಸಿದ್ದಾರ್ಥ ರೆಡೂ, ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ, ಮೇಜರ್ ಮಹೇಶ ಗುರನಗೌಡರ, ಲೆಫ್ಟಿನೆಂಟ್ ಸಿದ್ದಪ್ಪ ಚೌಗುಲೆ, ಜೆಸಿಒ ಸುಭಾಸ ಭಟ್, ವಿನಾಯಕ ಔಟೆ, ಮುಲು ಸಿಂಗ್ ಇತರರಿದ್ದರು.
Laxmi News 24×7