ನವದೆಹಲಿ: ಭಾನುವಾರ ರಾತ್ರಿ ದೆಹಲಿಯ ಐಟಿಒ ಜಂಕ್ಷನ್ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹಾಗೂ ದೆಹಲಿಯ ಕಿರಾರಿ ಕ್ಷೇತ್ರದ ಶಾಸಕ ಅನಿಲ್ ಝಾ ಸೇರಿ ಒಟ್ಟು 6 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಸುಮಾರು 9:30 ರ ಸುಮಾರಿಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರಿನ ಸಿಲಿಂಡರ್ ಪಿಡಬ್ಲ್ಯೂಡಿ ಕಚೇರಿ ಬಳಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕ (ಡಿವೈಡರ್) ಹಾಗೂ ರೇಲಿಂಗ್ಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ‘ಕರ್ನಾಟಕ ಸರ್ಕಾರ’ದ ಬೋರ್ಡ್ ಹೊಂದಿದ್ದ ಇನ್ನೋವಾ ಎಸ್ಯುವಿ ಕಾರಿಗೆ ರಭಸವಾಗಿ ಅಪ್ಪಳಿಸಿದೆ.
ಸ್ವಿಫ್ಟ್ ಕಾರನ್ನು ಅಶುತೋಷ್ ಪಾಂಡೆ (32) ಎಂಬುವವರು ಚಲಾಯಿಸುತ್ತಿದ್ದು, ಕಾರಿನಲ್ಲಿ ಅವರ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳಿದ್ದರು. ಇನ್ನೋವಾ ಕಾರಿನಲ್ಲಿ ಶಾಸಕರಾದ ಅನಿಲ್ ಝಾ ಹಾಗೂ ಅಭಯ್ ಪಾಟೀಲ್ ಪ್ರಯಾಣಿಸುತ್ತಿದ್ದರು.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಐಪಿ ಎಸ್ಟೇಟ್ ಠಾಣಾ ಪೊಲೀಸರು ಧಾವಿಸಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ಮತ್ತು ಕಾರಿನ ವೇಗದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Laxmi News 24×7