ಬೆಂಗಳೂರು: ನಾಪತ್ತೆಯಾಗಿರುವ ಐಎಎಸ್ ಗ್ಯಾನೇಂದ್ರ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 5 ಗಂಟೆಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ಜಯಮಹಲ್ ಎಕ್ಸ್ಟೆನ್ಞನ್ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ಇದರ ಮಧ್ಯೆಯೇ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಕ್ರಮ ಹಣದ ವ್ಯವಹಾರದಲ್ಲೂ ಗ್ಯಾನೇಂದ್ರ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇಡಿ ಮೂಲಗಳಿಂದ ತಿಳಿದುಬಂದಿದೆ.
ಇದಕ್ಕೂ ಮುನ್ನ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಸದಸ್ಯೆ ಶಾಂತ ಹೊಸಮನಿ, ಕೆಪಿಎಸ್ಸಿ ಕಚೇರಿ, ಕೆಲ ಅಧಿಕಾರಿಗಳು, ದಲ್ಲಾಳಿಗಳು ಹಾಗೂ ಅಭ್ಯರ್ಥಿಗಳ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಗಳು ಪತ್ತೆಯಾಗಿದ್ದವು.
ಪತ್ತೆಯಾದ ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ವ್ಯವಹಾರಕ್ಕೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರಿಗೂ ಸಂಪರ್ಕ ಇರುವ ಬಗ್ಗೆಯೂ ದಾಖಲೆಗಳು ಪತ್ತೆಯಾಗಿದ್ದವು. ಈ ಹಿನ್ನೆಲೆ ಇಂದು ಗ್ಯಾನೇಂದ್ರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Laxmi News 24×7