Breaking News

ಐಫೋನ್ EMI ವಿಚಾರಕ್ಕೆ ಮೂವರ ದುರಂತ ಅಂತ್ಯ – 2025ರಲ್ಲಿ ಅದೇ ಜಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ

Spread the love

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ  ಜಿಲ್ಲೆಯಲ್ಲಿ ಐಫೋನ್ ಇಎಂಐ  ವಿಚಾರವಾಗಿ ಜಗಳವಾಗಿ ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಈ ಪ್ರಕರಣ ಸಂಬಂಧ ಒಂದೊಂದೇ ವಿಷಯಗಳು ಹೊರಬರುತ್ತಿವೆ. ಇದೀಗ ಅದೇ ಜಾಗದಲ್ಲಿ 2025ರಲ್ಲೂ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೊಹಡ್ಯಾ ಡೋಂಗರ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಐಫೋನ್ ಖರೀದಿಯ ಇಎಂಐ ಪಾವತಿ ವಿಚಾರವಾಗಿ ಮನೆಯಲ್ಲಿ ಉಂಟಾದ ವಿವಾದದ ಬಳಿಕ 19 ವರ್ಷದ ಯುವಕ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಮಗನನ್ನು ರಕ್ಷಿಸಲು ತಂದೆ-ತಾಯಿ ನಡೆಸಿದ ಕೊನೇ ಹೋರಾಟ ದುರಂತದಲ್ಲಿ ಅಂತ್ಯಗೊಂಡಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಗನನ್ನ ಉಳಿಸಿಕೊಳ್ಳಲು ತಾಯಿ ಪಟ್ಟ ಕಷ್ಟ ಮನ ಕಲಕುವಂತಿದೆ.

ಮಗನ ಮುಂದೆ ಕೈಮುಗಿದು, ಕಾಲಿಗೆ ಬಿದ್ದ ತಾಯಿ:
19 ವರ್ಷದ ಕುನಾಲ್ ಚಂದ್ಗುಡೆ ಬೆಟ್ಟದ ತುತ್ತ ತುದಿಯಲ್ಲಿ ನಿಂತಿದ್ದ. ಮಗನನ್ನು ಹೇಗಾದ್ರೂ ಬದುಕಿಸಿಕೊಳ್ಳಬೇಕು ಅಂತ ಆತಂಕದಲ್ಲಿದ್ದ ತಾಯಿ ಸಂಗೀತಾ ಚಂದ್ಗುಡೆ ನೆಲದ ಮೇಲೆ ಕುಳಿತು ಕಣ್ಣೀರಿಡುತ್ತಾ, ಪದೇಪದೇ ಹಿಂದೆ ಬರುವಂತೆ ಮಗನಿಗೆ ಮನವಿ ಮಾಡುತ್ತಿದ್ದರು. ಮಾತಿನಿಂದ ಮಗನ ಮನಸ್ಸು ಬದಲಾಗದಿದ್ದಾಗ, ಮೊಣಕಾಲೂರಿ ಕೈಮುಗಿದು ಬೇಡಿಕೊಂಡರು. ಕಾಲಿಗೆ ಬಿದ್ದರು, ಫೋನ್ ತೆಗೆದುಕೊ ಅಂತ ತನ್ನ ತಾಳಿಯನ್ನೇ ತೆಗೆದು ಮಗನ ಮುಂದೆ ಎಸೆದರು.

ಆದಾಗ್ಯೂ ಕುನಾಲ್‌ಗೆ ಮನಸ್ಸು ಕರಗಲೇ ಇಲ್ಲ, ಇನ್ನಷ್ಟು ತುದಿಗೆ ತಲುಪಿದ. ಇದನ್ನ ಕಂಡು ತಾಯಿ ಭಯದಿಂದ ಹಿಂದೆ ಸರಿದಿದ್ದಾರೆ. ಕೊನೆಗೆ ಮಗ ಆತ್ಮಹತ್ಯೆ ಮಾಡಿಕೊಂಡರೆ ತಾನೂ ಬೆಟ್ಟದಿಂದ ಹಾರಿ ಬೀಳುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಲ್ಲಿದ್ದ ಸ್ಥಳೀಯರು ತಾಯಿಯನ್ನ ಹಿಡಿದು ಹಿಂದೆಳೆದು ರಕ್ಷಿಸಲು ಪ್ರಯತ್ನಿಸಿದರು.

`ಅಮ್ಮಾ, ಯಾರೂ ನನ್ನ ಮಾತು ಕೇಳುತ್ತಿಲ್ಲ…’
ಪೊಲೀಸರ ಪ್ರಕಾರ, ಸಂಗೀತಾ ತಮ್ಮ ಮಗನಿಗೆ ಸಮಸ್ಯೆ ಏನೇ ಇರಲಿ, ಅದನ್ನು ಪರಿಹರಿಸುವುದಾಗಿ ಭರವಸೆ ನೀಡುತ್ತಿದ್ದರು. ಸಾಲ ಮತ್ತು ಆರ್ಥಿಕ ತೊಂದರೆಗಳನ್ನು ಸರಿಪಡಿಸುವುದಾಗಿ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಆದರೆ ತೀವ್ರ ಆಕ್ರೋಶ ಮತ್ತು ಮಾನಸಿಕ ಒತ್ತಡದಲ್ಲಿದ್ದ ಕುನಾಲ್, `ಅಮ್ಮಾ, ಯಾರೂ ನನ್ನ ಮಾತು ಕೇಳುತ್ತಿಲ್ಲ. ನನಗೆ ಬದುಕುವ ಆಸೆಯೇ ಇಲ್ಲ. ನನ್ನ ಜೀವನಕ್ಕೆ ಯಾವುದೇ ಪರಿಹಾರವಿಲ್ಲ. ಇನ್ನು ಯಾವುದೂ ಸರಿಯಾಗುವುದಿಲ್ಲ’ ಅಂತ ಹೇಳಿದ್ದಾನೆ.

ಐಫೋನ್ ಇಎಂಐ ವಿಚಾರದಿಂದ ಆರಂಭವಾದ ಜಗಳ:
ಮಾಹಿತಿಯ ಪ್ರಕಾರ, ಕುನಾಲ್ ಇತ್ತೀಚೆಗೆ ಐಫೋನ್ ಖರೀದಿಸಿದ್ದ. ಆದರೆ ಅದರ ಸಾಲದ ಕಂತುಗಳನ್ನ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರವಾಗಿ ತಂದೆ ಮುರಳೀಧರ್ ಮತ್ತು ಕುನಾಲ್ ನಡುವೆ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಈ ಘಟನೆಯ ಬಳಿಕ ಶುಕ್ರವಾರ ಬೆಳಗ್ಗೆ ಸುಮಾರು 10 ಗಂಟೆಗೆ ಕುನಾಲ್ ಮನೆಯಿಂದ ಹೊರಟು ಬೆಟ್ಟದ ಪ್ರದೇಶಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ಮಗನನ್ನು ಉಳಿಸಲು ಹೋದ ತಂದೆಯೂ ಸಾವು:
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕುನಾಲ್‌ನನ್ನು ಮನವೊಲಿಸಲು ಪ್ರಯತ್ನಿಸಿದರು. ಮಧ್ಯಾಹ್ನ ಸುಮಾರು 1 ಗಂಟೆಯಾದರೂ ಆತ ಯಾರ ಮಾತನ್ನೂ ಕೇಳಲು ಸಿದ್ಧನಾಗಿರಲಿಲ್ಲ. ಕೊನೆಗೆ ತಂದೆ ಮುರಳೀಧರ್ ಮಗನನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಎಳೆತರಲು ಅಪಾಯಕಾರಿ ಪ್ರಯತ್ನ ಮಾಡಿದರು. ಆದರೆ ಮಗನ ಕೈ ಹಿಡಿದು ಎಳೆಯಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಇಬ್ಬರೂ ಕಂದಕಕ್ಕೆ ಬಿದ್ದಿದ್ದಾರೆ.

ಕಣ್ಣೆದುರೇ ಮಗ, ಪತಿಯನ್ನು ಕಳೆದುಕೊಂಡ ತಾಯಿ ತಾನೂ ದುಃಖ ತಡೆಯಲಾರದೇ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಮಗನನ್ನು ಉಳಿಸಿಕೊಳ್ಳಲು ಆರಂಭವಾದ ತಾಯಿಯ ಹೋರಾಟ, ಕೊನೆಗೆ ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಘಟನೆ ನಡೆದ ಬಳಿಕ ತಾಯಿ ಮಗನ ಆತ್ಮೀಯ ಕ್ಷಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. 2025ರಲ್ಲಿ ಯುವಕ ಅದೇ ಜಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಟಿಬಿ ಮುಕ್ತ ಭಾರತ ಅಭಿಯಾನ ಅತ್ಯಂತ ಶ್ಲಾಘನೀಯ

Spread the loveಬೆಳಗಾವಿ : ಭಾರತವನ್ನು ಕ್ಷಯರೋಗ (ಟಿಬಿ) ಮುಕ್ತ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿಯಾನ ಅತ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ