Breaking News

2027ರ ಜನವರಿ ಅಂತ್ಯಕ್ಕೆ ವಿಮಾನಯಾನ – ಕೊನೆ ಹಂತದತ್ತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

Spread the love

ವಿಜಯಪುರ: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ವರ್ಷಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಿಸುವ ಪ್ರಯತ್ನ ಕೈಗೂಡಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ತಿಳಿಸಿದರು.

ವಿಮಾನ ನಿಲ್ದಾಣಕ್ಕಿಂದು ಭೇಟಿ ನೀಡಿ, ಪ್ರಗತಿ ಪರಿಶೀಲಿಸಿದ ಬಳಿಕ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಿಸರ ಇಲಾಖೆಯ ಅನುಮತಿ ಇಲ್ಲದೇ ಇರುವುದರಿಂದ ಹಾಗೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ ವಿಳಂಬವಾಗಿದೆ. ನಂತರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ.ಪಾಟೀಲ್‌  ಅವರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸಿದ್ದರಿಂದ ಇದೀಗ ಮೂರು ವಾರಗಳ ಹಿಂದೆ ತಡೆಯಾಜ್ಞೆ ತೆರವಾಗಿದೆ ಎಂದರು.

ಕೇಂದ್ರ ಪರಿಸರ ಇಲಾಖೆ ಅನುಮತಿ ಕೋರಿದ್ದೇವೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ತಡವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ಸಿಗಲಿದೆ. ರಾತ್ರಿ ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣವಾಗಲಿದೆ. ನೈಟ್ ಲ್ಯಾಂಡಿಂಗ್‌ಗಾಗಿ ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಜನವರಿ ತಿಂಗಳೊಳಗಾಗಿ ವಿಮಾನಯಾನ ಆರಂಭಿಸುವ ಪ್ರಯತ್ನ ಸಫಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಂತ್ರಿಕ ವಿಭಾಗ ಹಾಗೂ ರಾಷ್ಟ್ರೀಯ ವಿಮಾನಯಾನ‌ ಇಲಾಖೆಯಿಂದ ಅಂತಿಮ ಅನುಮೋದನೆ ದೊರಕಿದ ಮೇಲೆ ವಿಮಾನ ಹಾರಾಟ ಆರಂಭವಾಗಲಿದೆ. ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಶ್ರಮದಿಂದ ಹೊಸ ವರ್ಷದಲ್ಲಿ ವಿಮಾನಯಾನ ಆರಂಭವಾಗಲಿದೆ. ವಿಜಯಪುರ ವಿಮಾನ ನಿಲ್ದಾಣವನ್ನು ಏರ್ ಬಸ್-320 ವಿಮಾನಗಳ ಹಾರಾಟಕ್ಕಾಗಿ ಒಟ್ಟು 618.75 ಕೋಟಿ ರೂ. ಮೊತ್ತಕ್ಕೆ ಮಂಜೂರಾಗಿತ್ತು. ಈ ಕಾಮಗಾರಿಗಾಗಿ ಕರ್ನಾಟಕ ಸರ್ಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಅನುದಾನ ಭರಿಸಲಾಗುತ್ತಿದೆ. ಈ ಕಾಮಗಾರಿಯ ಮೇಲ್ವಿಚಾರಣೆಗಾಗಿ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರಿನ ಐಡೆಕ್ ಸಂಸ್ಥೆ ಅವರನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನ್ನಾಗಿ ನೇಮಿಸಲಾಗಿದೆ ಎಂದು ವಿವರಿಸಿದರು.

ಕಾಮಗಾರಿ ವಿನ್ಯಾಸ:
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯ ವಿನ್ಯಾಸವನ್ನು ಪರಿಣಿತರಾದ ಗುರಗಾಂವನ ಮೆಸ್ಸರ್ಸ್ ರೈಟ್ಸ್ ವಹಿಸಲಾಗಿತ್ತು. ಏರ್ ಬಸ್-320 ಮಾದರಿಯ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ಒಟ್ಟು 618.75 ಕೋಟಿ ರೂ. ಮೊತ್ತದಲ್ಲಿ ವಿಮಾನ ನಿಲ್ದಾಣವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಪ್ಯಾಕೇಜ್-1: ಕಾಮಗಾರಿಯಲ್ಲಿ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಐಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು, ಹಾಗೂ ಇತರೆ ಪೇವಮೆಂಟ್ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ಯಾಕೇಜ-2: ಕಾಮಗಾರಿಯಲ್ಲಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್ ಕಟ್ಟಡ, ಸಿ.ಎಫ್.ಆರ್. ಕಟ್ಟಡ, ಇ.ಎಸ್.ಎಸ್. ಕಟ್ಟಡ, ಆರ್ಮರಿ & ಡಾಗ್ ಕೆನೆಲ್ ಕಟ್ಟಡ, ಕ್ಯಾಂಟೀನ್ ಕಟ್ಟಡ, 10 ವಾಚ್ ಟಾವರ್ ಗಳು, ಫೈರ್ ಪಿಟ್, ಕೂಲಿಂಗ್ ಪಿಟ್, ಕೆಳಮಟ್ಟದ & ಮೇಲ್ಮಟ್ಟದ ನೀರು ಸಂಗ್ರಹಾಲಯ, ಎಸ್.ಟಿ.ಪಿ., ಪಂಪ್ ಹೌಸ್, ಕಂಪೌಂಡ ಗೋಡೆ, ಸೋಲಾರ್ ಪ್ಯಾನೆಲ್, ಏವಿಯೋನಿಕ್ಸ್ ಮತ್ತು ಭದ್ರತಾ ಉಪಕರಣಗಳು, ವಿಮಾನ ನಿಲ್ದಾಣಕ್ಕೆ 24/7 2000 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕ ಕಾಮಗಾರಿ, 24/7 ನೀರು ಸರಬರಾಜು ಕಾಮಗಾರಿ, ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಅವಶ್ಯವಿರುವ ಎರಡು ಅಗ್ನಿಶಾಮಕ ವಾಹನಗಳು, ಬಿ.ಡಿ.ಡಿ.ಎಸ್. ಉಪಕರಣಗಳು, ಡಿ.ವಿ.ಓ.ಆರ್. ಉಪಕರಣಗಳನ್ನು ಕೂಡಾ ಖರೀದಿಸಲಾಗಿದೆ ತಿಳಿಸಿದರು.

ಈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ರಾತ್ರಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಅವಶ್ಯವಿರುವ (ಭೂಸ್ವಾಧೀನ ಒಳಗೊಂಡಂತೆ) 65 ಕೋಟಿ ರೂ. ಮೊತ್ತವನ್ನು ಹಾಗೂ ರಾಷ್ಟ್ರೀಯ ಹೆದ್ದಾರಿ-50 (ವಿಜಯಪುರ-ಕಲಬುರಗಿ ರಸ್ತೆ) ಯಿಂದ ವಿಮಾನ ನಿಲ್ದಾಣಕ್ಕೆ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡಲು ಅವಶ್ಯವಿರುವ (ಭೂಸ್ವಾಧೀನ ಒಳಗೊಂಡಂತೆ) 52 ಕೋಟಿ ರೂ. ಮೊತ್ತದ ಅನುದಾನಕ್ಕೆ ರಾಜ್ಯ ಸರ್ಕಾರ 2025ರ ಅಕ್ಟೋಬರ್ 3 ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಎರಡೂ ಕಾಮಗಾರಿಗಳಿಗೆ ಅವಶ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಡಲು ಕೆ.ಐ.ಎ.ಡಿ.ಬಿ. ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಈಗಾಗಲೇ ಪ್ರಾಥಮಿಕ ಅಧಿಸೂಚನೆ ಅನುಮೋದನೆಯಾಗಿದ್ದು, ಭೂಮಾಲಿಕರ ಜೊತೆ ಆಕ್ಷೇಪಣೆ ಸಭೆಯನ್ನು ಕೈಕೊಳ್ಳಲಾಗಿರುತ್ತದೆ. ಪ್ರಸ್ತುತ ಜೆ.ಎಮ್.ಸಿ. ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಜೆ.ಎಮ್.ಸಿ. ಕೆಲಸ ಪೂರ್ಣಗೊಳಿಸಿ, ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದ ಅವರು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಟೆಂಡರ್ ಆಹ್ವಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕಾಧಿಕಾರಿ ಸಿ.ಎಸ್. ಪೊಲೀಸ್ ಪಾಟೀಲ, ಸಹಾಯಕ ಎಂಜಿನೀಯರ್ ಆರ್.ಎನ್. ಮಸಳಿ, ವಿಮಾನ ನಿಲ್ದಾಣದ ನಿರ್ದೇಶಕ ಪಿ.ಸಿ. ಪೊನ್ನಪ್ಪ ಹಾಗೂ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಹೇಳದೇ ಕೇಳದೇ ಸರ್ಕಾರಿ ಶಾಲೆ ಪ್ರವೇಶ, ಶಿಕ್ಷಕರಿಗೆ ಬೆದರಿಕೆ – ʻಕಾಕ್ರೋಚ್‌ʼ ದೀಪ್ಕೆ ವಿರುದ್ಧ ಎಫ್‌ಐಆರ್

Spread the loveಮುಂಬೈ: ಮಹಾರಾಷ್ಟ್ರದ ಲಾತೂರ್  ಜಿಲ್ಲೆಯ ಪೊಲೀಸರು ಕಾಕ್ರೋಚ್‌ ಜನತಾ ಪಾರ್ಟಿ  ಮುಖ್ಯಸ್ಥ ಅಭಿಜೀತ್ ದೀಪ್ಕೆ ಹಾಗೂ ಇತರರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ