ದಾವಣಗೆರೆ: ಬೆಂಗಳೂರಿಗೆ ಹೋಗಿ ಬರುತ್ತೇವೆ ಎಂದು ಪೋಷಕರಿಗೆ ಹೇಳಿ ಮನೆಯಿಂದ ಹೊರಟಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕುಟುಂಬದ ನಾಲ್ವರು ಸದಸ್ಯರ ಮೊಬೈಲ್ಗಳು ಸ್ವಿಚ್ಆಫ್ ಆಗಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ.
ದಾವಣಗೆರೆ ನಗರದ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿದ್ದ ರಮೇಶ್ ಕುಮಾರ್ (38), ಅವರ ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣ (3) ನಾಪತ್ತೆಯಾದವರು. ಮೂಲತಃ ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದವರಾದ ರಮೇಶ್ ಕುಮಾರ್ ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ಮಾಡಿಕೊಂಡು ಕುಟುಂಬದೊAದಿಗೆ ದಾವಣಗೆರೆಯಲ್ಲಿ ನೆಲೆಸಿದ್ದರು.
ರಮೇಶ್ ಕುಮಾರ್ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕುಟುಂಬ ಸಮೇತ ಮನೆ ಬಿಟ್ಟು ಹೋಗಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಆಗಸ್ಟ್ 14ರಂದು ರಮೇಶ್ ಕುಮಾರ್ ತಮ್ಮ ಪೋಷಕರಿಗೆ ಕರೆ ಮಾಡಿ, ವೈಯಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ಬರುತ್ತೇವೆ ಎಂದು ತಿಳಿಸಿದ್ದಾರೆ. ಬಳಿಕ ರಮೇಶ್ ಕುಟುಂಬ ತಮ್ಮ ಸ್ವಂತ ಕಾರು ಅಥವಾ ಬೈಕ್ ಬಳಸದೆ, ಅವುಗಳನ್ನು ಮನೆಯ ಬಳಿಯೇ ನಿಲ್ಲಿಸಿ, ಆಟೋದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಆದರೆ ಬೆಂಗಳೂರಿಗೆ ತೆರಳಿದ ಬಳಿಕ ನಾಲ್ವರೂ ಇದುವರೆಗೆ ಮನೆಗೆ ವಾಪಸ್ ಬಂದಿಲ್ಲ. ಕುಟುಂಬದ ಎಲ್ಲರ ಮೊಬೈಲ್ಗಳು ಸ್ವಿಚ್ಆಫ್ ಆಗಿದ್ದು, ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.
ಇದರಿಂದ ಆತಂಕಗೊಂಡ ರಮೇಶ್ ಅವರ ಪೋಷಕರು ಹಾಗೂ ಸಂಬಂಧಿಕರು ಬೆಂಗಳೂರು ಸೇರಿದಂತೆ ಪರಿಚಯವಿರುವ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೂ ನಾಲ್ವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಕೊನೆಗೆ ಕುಟುಂಬಸ್ಥರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ರಮೇಶ್ ಅವರ ಕೊನೆಯ ಮೊಬೈಲ್ ನೆಟ್ವರ್ಕ್ ಲೊಕೇಶನ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
Laxmi News 24×7