ಮಂಡ್ಯ: ಕಾವೇರಿ ಕೊಳ್ಳದಲ್ಲಿ ಹೋರಾಟದ ಕಿಚ್ಚು ತೀವ್ರಗೊಂಡಿದೆ. ತಮಿಳುನಾಡಿಗೆ ನೀರು ಬಿಡೋ CWMA (ಕಾವೇರಿ ನೀರು ನಿರ್ವಹಣಾ ಮಂಡಳಿ) ಆದೇಶಕ್ಕೆ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ಈ ತಾರತಮ್ಯದ ಆದೇಶ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರೋ ಬಿಜೆಪಿ (BJP), ಇವತ್ತು (ಜ.31) ಬೆಳಿಗ್ಗೆ 11 ಗಂಟೆಗೆ ಕೆಆರ್‌ಎಸ್ (KRS) ಜಲಾಶಯಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಇದರಿಂದಾಗಿ ಜಲಾಶಯದ ಬಳಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮಂಡ್ಯ-ಮೈಸೂರು ಭಾಗದ ಸಾವಿರಾರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಜಲಾಶಯದತ್ತ ಬರಲಿದ್ದಾರೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹನಿ ನೀರನ್ನೂ ಹರಿಸಬಾರದು ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಲಿದ್ದಾರೆ.
ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ, ಇದು ರಾಜ್ಯದ ಸಮಸ್ಯೆ, ರಾಜ್ಯದ ಜನರ ಸಮಸ್ಯೆ ರಾಜ್ಯದಲ್ಲಿ ಕುಡಿಯೋ ನೀರಿಗೂ ತೊಂದರೆ ಇದೆ. ಹಳ್ಳಿ-ಹಳ್ಳಿಯಲ್ಲೂ ನೀರಿನ ಸಮಸ್ಯೆ ಇದೆ, ಜಲ ಮೂಲಗಳು ಬತ್ತಿ ಹೋಗಿವೆ. ಇದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಒಂದೇ ಒಂದು ಹನಿ ನೀರು ಬಿಟ್ಟಿದ್ದೇ ಆದರೆ, ರಾಜ್ಯ ಸರ್ಕಾರ ಜನರ ಮೇಲೆ ಹೇರುವ ಮರಣ ಶಾಸನವಾಗುತ್ತೆ ಎಂದು ಎಚ್ಚರಿಸಿದ್ದರು.
ಮಂಡ್ಯ ನಗರದಲ್ಲಿ ಈಗಾಗಲೇ ಉಗ್ರ ಪ್ರತಿಭಟನೆ ಆರಂಭವಾಗಿದ್ದು, ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಹೋರಾಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹೋರಾಟಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಇಡೀ ಮಂಡ್ಯ ಜಿಲ್ಲೆ ಇವತ್ತು ಸಂಪೂರ್ಣ ಸ್ತಬ್ಧಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
Laxmi News 24×7