ಮೈಸೂರು: ಆ.1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿಗೆ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಶೇಷ ಉಡುಗೊರೆಯೊಂದನ್ನು ನೀಡಲಿದ್ದಾರೆ.
ಆ.1ರಂದು ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಮೂರ್ತಿ 8.5 ಕೆಜಿ ತೂಕದ, 1.5 ಅಡಿ ಎತ್ತರದ ವಿಯೆಟ್ನಾಂ ಮಾರ್ಬಲ್ನಲ್ಲಿ ನಿರ್ಮಾಣವಾಗಿದೆ.
ಕೇವಲ 15 ದಿನಗಳಲ್ಲಿ ಅರುಣ್ ಯೋಗಿರಾಜ್ ಈ ಮೂರ್ತಿಯನ್ನು ಕೆತ್ತಿದ್ದಾರೆ. ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮಾದರಿಯಲ್ಲಿ ಇದು ನಿರ್ಮಾಣವಾಗಿದೆ. ಅಲ್ಲದೇ ಪ್ರಧಾನಿ ಅವರು ಸುಲಭವಾಗಿ ಕೈಯಲ್ಲಿ ಹಿಡಿಯುವಂತೆ 10 ಕೆ.ಜಿಯೊಳಗೆ ಮೂರ್ತಿ ವಿನ್ಯಾಸ ಮಾಡಿರುವುದು ವಿಶೇಷ. ಜೊತೆಗೆ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನ ಪ್ರತಿಬಿಂಬಿಸುವ ವಿಶೇಷ ಉಡುಗೊರೆಯನ್ನೂ ಪ್ರಧಾನಿ ಅವರಿಗೆ ಅರ್ಪಿಸಲಾಗುತ್ತದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.
45 ಕೋಟಿ ವೆಚ್ಚದ ಸ್ವಾಮಿ ವಿವೇಕಾನಂದರ ಸ್ಮಾರಕ ಉದ್ಘಾಟನೆ:
ಆಗಸ್ಟ್ 1ರಂದು ಮೋದಿ ಅವರು 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟನೆ ಮಾಡಲಿದ್ದಾರೆ.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿ ನೆಲೆಸಿದ್ದರು ಎನ್ನುವ ನೆನಪಿಗಾಗಿ ಸ್ಮಾರಕ ಹಾಗೂ ಯುವ ಜನರಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಯುವ ಕೇಂದ್ರವನ್ನ ನಿರ್ಮಿಸಲಾಗಿದ್ದು, ಪ್ರಧಾನಿಗಳು ಉದ್ಘಾಟಿಸಲಿದ್ದಾರೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.
ಸ್ಮಾರಕ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ನಗರದಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಆಶ್ರಮದ ಆಡಿಟೋರಿಯಂನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 30 ನಿಮಿಷಗಳ ಕಾಲ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು 6,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ವಿಶೇಷ ಪಾಸ್ ಕೂಡ ಇರಲಿದೆ. ಪಾಸ್ ಇದ್ದವರಿಗಷ್ಟೇ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ವೇದಿಕೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಹರೀಶ್ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉಪಸ್ಥಿತರಿರಲಿದ್ದಾರೆ. ಭದ್ರತಾ ಕಾರಣಗಳಿಂದ ವೇದಿಕೆಯಲ್ಲಿ ಕೆಲವೇ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
Laxmi News 24×7