ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖ್ಯಾತ ತಮಿಳು ನಟಿ ಜ್ಯೋತಿಕಾ ಆಗ್ರಹಿಸಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ತಮ್ಮ ಪೋಸ್ಟ್ನಲ್ಲಿ ಜ್ಯೋತಿಕಾ, ʻಧರ್ಮೇಂದ್ರ ಪ್ರಧಾನ್ ಅವರೇ, ಹುದ್ದೆಯಿಂದ ಕೆಳಗಿಳಿಯಿರಿ. ರಾಜೀನಾಮೆ ನೀಡಿʼ ಎಂದು ನೇರವಾಗಿ ಒತ್ತಾಯಿಸಿದ್ದಾರೆ.
ಅಲ್ಲದೇ, ನಾನು ವಿದ್ಯಾರ್ಥಿಗಳು ಮತ್ತು ನಮ್ಮ ದೇಶದ ಭವಿಷ್ಯದ ಪರವಾಗಿದ್ದೇನೆ. ನಾನು ಹೊಣೆಗಾರಿಕೆಯ ಪರವಾಗಿದ್ದೇನೆ. ನಾನು ಪ್ರಜಾಪ್ರಭುತ್ವ ಭಾರತದ ಪರವಾಗಿದ್ದೇನೆ. ನಾನು ಸುಧಾರಿತ ಶಿಕ್ಷಣ ವ್ಯವಸ್ಥೆಯ ಪರವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಉಪವಾಸ ಸತ್ಯಾಗ್ರಹ ನಡೆಸಿದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್, ವಿದ್ಯಾರ್ಥಿ ಹೋರಾಟಗಾರರಾದ ಅಭಿಜೀತ್ ದೀಪ್ಕೆ ಹಾಗೂ ಸೌರವ್ ದಾಸ್ ಅವರ ಧೈರ್ಯವನ್ನು ಜ್ಯೋತಿಕಾ ಶ್ಲಾಘಿಸಿದ್ದಾರೆ. ʻತಾಯಂದಿರಾಗಿ ನಮ್ಮ ಮಕ್ಕಳನ್ನು ನಿಮ್ಮಂತೆಯೇ ಬೆಳೆಸಲು ನಾವು ಬಯಸುತ್ತೇವೆ. ಯಾವುದೇ ಮುಚ್ಚುಮರೆಯಿಲ್ಲದೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ‘ಜೆನ್ Z’ ಪೀಳಿಗೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರೂ ಒಗ್ಗೂಡಿ ‘ನಾವೇ ಭಾರತ’ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿʼ ಎಂದು ಅವರು ಹೇಳಿದ್ದಾರೆ.
ಹೋರಾಟಗಾರರು ಒತ್ತಡದ ವಾತಾವರಣವನ್ನ ಮುರಿದು ಜನರಲ್ಲಿ ನಿರ್ಭೀತಿ ಮೂಡಿಸಿದ್ದಾರೆ ಎಂದು ಪ್ರಶಂಸಿಸಿದ ನಟಿ, ಒತ್ತಡದ ವಾತಾವರಣವನ್ನು ಮುರಿದಿದ್ದಕ್ಕಾಗಿ ಮತ್ತು ನಮ್ಮನ್ನು ನಿರ್ಭೀತರನ್ನಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಜ್ಯೋತಿಕಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
Laxmi News 24×7