ಬೆಂಗಳೂರು: ಮತದಾರರು ಭರ್ತಿ ಮಾಡಿದ ಗಣತಿ ನಮೂನೆಯನ್ನು ಬಿಎಲ್ಒಗಳಿಗೆ ಹಿಂದಿರುಗಿಸದೇ ಇದ್ರೆ, ಅಂಥವರ ಹೆಸರನ್ನ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಶ್ರೀ ಕೆ.ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ ಬಿಎಲ್ಒ ಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂ ನೀಡುವ, ಭರ್ತಿ ಮಾಡಿದ ಅರ್ಜಿಗಳನ್ನ ಬಿಎಲ್ಒಗಳು ಪಡೆಯುವ ಹಾಗೂ ಭರ್ತಿ ಮಾಡಲಾದ ಅರ್ಜಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲಿದೆ ಎಂದು ತಿಳಿಸಿದ್ದಾರೆ.
ಮನೆ ಮನೆ ಭೇಟಿ ಕಡ್ಡಾಯ
ವಿಶೇಷ ಪರಿಷ್ಕರಣೆಯ ಅಂಗವಾಗಿ ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮತದಾರರ ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ ಗಣತಿ ನಮೂನೆಗಳನ್ನು ನೀಡುತ್ತಿದ್ದಾರೆ. ಮತದಾರರು ಆ ಫಾರ್ಮ್ಗಳಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನ ಭರ್ತಿ ಮಾಡಿ ಕಡ್ಡಾಯವಾಗಿ ಮರಳಿ ಬಿ.ಎ.ಲ್.ಒಗಳಿಗೇ ಮಾತ್ರ ನೀಡುವಂತೆ ತಿಳಿಸಿದ್ದಾರೆ.
ಫಾರ್ಮ್ ಭರ್ತಿ ಮಾಡುವ ವಿಧಾನ (ವಿಡಿಯೋ ಲಿಂಕ್)
ಮತದಾರರು ನಮೂನೆಯನ್ನು ಹೇಗೆ ಭರ್ತಿ ಮಾಡಬೇಕೆಂದು ತಿಳಿಯುವ ಸಂಬಂಧ ಸಾರ್ವಜನಿಕರ ನೆರವಿಗಾಗಿ ಭಾರತೀಯ ಚುನಾವಣಾ ಆಯೋಗದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿರುವ ಮಾರ್ಗದರ್ಶಿ ವಿಡಿಯೋಗಳನ್ನು ವೀಕ್ಷಿಸಬಹುದು. ಆಯೋಗದ ಚಾನೆಲ್ನಲ್ಲಿ ಫಾರ್ಮ್ ಭರ್ತಿ ಮಾಡುವ ಹಂತ ಹಂತದ ವಿವರಗಳ ವಿಡಿಯೋಗಳು ಲಭ್ಯವಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗಣತಿ ನಮೂನೆ ಹಿಂತಿರುಗಿಸದಿದ್ರೆ ಮತದಾರರ ಹೆಸರು ಔಟ್
ಮತದಾರರ ಪಟ್ಟಿಯ ನಿಖರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಮತದಾರರು ಬಿ.ಎಲ್.ಒಗಳು ನೀಡಿದ ಗಣತಿ ನಮೂನೆಯನ್ನು ಭರ್ತಿ ಮಾಡಿ ಮರಳಿ ಸಲ್ಲಿಸದೇ ಇದ್ದರೆ, ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸದೆ ಜವಾಬ್ದಾರಿಯಿಂದ ಸಹಕರಿಸಬೇಕು ಎಂದು ಎಚ್ಚರಿಸಿದ್ದಾರೆ.
ಮತದಾರರು ಎಸ್ಐಆರ್ ಕುರಿತಂತೆ ಹಾಗೂ ಮತದಾರರ ಪಟ್ಟಿ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಲಿಂಕ್ ಗಳ ವೀಕ್ಷಣೆ ಮಾಡಬಹುದಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್ ಮಾಹಿತಿ ನೀಡಿದ್ದಾರೆ.
Laxmi News 24×7