ಬೆಂಗಳೂರು: ಕರ್ನಾಟಕದಲ್ಲಿ ಇನ್ನು ಮುಂದೆ ಶಾಶ್ವತ ನಿವಾಸ ಪ್ರಮಾಣ ಪತ್ರ ಸಿಗಲಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಮಾಡಿದ್ದು, ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಿದೆ. ಸತತ ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ವಾಸವಿದ್ದವರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ಸರ್ಕಾರ ಮುಂದಾಗಿದ್ದು, ಕೆಲ ಅರ್ಹತೆಗಳನ್ನು ಸಹ ಒಳಗೊಂಡಿರಬೇಕು.
ಪ್ರಮಾಣ ಪತ್ರ ನೀಡುವ ಪ್ರಾಧಿಕಾರವು ಅಗತ್ಯ ವಿಚಾರಣೆ ಹಾಗೂ ಪರಿಶೀಲನೆಯ ನಂತರ ಅರ್ಜಿದಾರರು ಕರ್ನಾಟಕ ರಾಜ್ಯದ ನಿಜವಾದ ಮತ್ತು ಶಾಶ್ವತ ನಿವಾಸಿಯಾಗಿದ್ದಾರೆ ಎಂಬ ಬಗ್ಗೆ ಖಚಿತಪಡಿಸಿಕೊಂಡು ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡಬಹುದು. ವಾಸಸ್ಥಳ ಅರ್ಜಿದಾರರು ಅಥವಾ ಅವರ ತಂದೆ/ತಾಯಿ ಅಥವಾ ಕಾನೂನುಬದ್ಧ ಪಾಲಕರು ಕರ್ನಾಟಕ ರಾಜ್ಯದಲ್ಲಿ ಸತತವಾಗಿ ಕನಿಷ್ಠ 10 ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸವಿರಬೇಕು. 7 ದಿನಗಳೊಳಗೆ ಶಾಶ್ವತ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಆರಂಭಿಸಲು ಸರ್ಕಾರದ ಸೂಚಿಸಿದ್ದು, ಆಯಾ ಜಿಲ್ಲಾಧಿಕಾರಿಗಳಿಗೆ ಮೇಲ್ವಿಚಾರಣೆ ವಹಿಸಿದೆ.
ಕರ್ನಾಟಕವೇ ಅರ್ಜಿದಾರರ ಪ್ರಮುಖ ಹಾಗೂ ಶಾಶ್ವತ ವಾಸಸ್ಥಳವಾಗಿದೆ ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ದಾಖಲಾತಿ, ವಿದ್ಯುನ್ಮಾನ ಅಥವಾ ಮೌಖಿಕ ಸಾಕ್ಷ್ಯಗಳನ್ನು ಇತರೆ ಪುರಾವೆಗಳೆಂದು ಪರಿಗಣಿಸುವಂತೆ ಆದೇಶ ಮಾಡಲಾಗಿದೆ. ಕಂದಾಯ ಇಲಾಖೆ ತೀರ್ಮಾನವೇ ಅಂತಿಮ ಎಂಬುದನ್ನ ಸಹ ಸ್ಪಷ್ಟಪಡಿಸಿದೆ.
Laxmi News 24×7