Breaking News

ಜೂನ್ ಕಳೆದ್ರೂ ಇಲ್ಲ ಮಳೆರಾಯನ ಸುಳಿವು – ಬತ್ತಿದ ಕೃಷ್ಣೆಯ ಒಡಲು, ಆಲಮಟ್ಟಿ ಡ್ಯಾಂ ಖಾಲಿಯಿಂದ ಅವಳಿ ಜಿಲ್ಲೆಗೆ ಆತಂಕ

Spread the love

ಬಾಗಲಕೋಟೆ: ಈ ಬಾರಿ ಜೂನ್ ಕಳೆದ್ರೂ ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲ. ಜೊತೆಗೆ ಆಲಮಟ್ಟಿ ಜಲಾಶಯವೂ  ಖಾಲಿ ಆಗಿದೆ. ಮಳೆಯಿಲ್ಲದ್ದಕ್ಕೆ ಕೃಷ್ಣೆಯ ಒಡಲು ಬತ್ತಿಹೋಗಿದ್ದು, ಅವಳಿ ಜಿಲ್ಲೆಗಳಾದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ.

ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಜೂನ್ ಕಳೆದ್ರೂ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಆಗಿಲ್ಲ. ಇದರಿಂದ ನದಿಗಳು ಬತ್ತಿ ಹೋಗ್ತಿವೆ. ಜಲಾಶಯಗಳು ಖಾಲಿ ಆಗ್ತಿವೆ. ಇದರಿಂದ ಜನರ ಮೊಗದಲ್ಲಿ ಆತಂಕ ಮೂಡಿದೆ. ಇನ್ನೂ ಇದರಿಂದ ಮೀನುಗಳಿಗೂ ಬರ ಬಂದಿದೆ. ಇದರಿಂದ ಕೃಷ್ಣಾ ನದಿ ಪಾತ್ರದ ಮೀನುಗಾರರ ಪರಿಸ್ಥಿತಿ ಅಧೋಗತಿಗೆ ಹೋಗಿದೆ. 

ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲಬಾಹದ್ದೂರ್ ಶಾಸ್ತ್ರಿ ಜಲಾಶಯ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿ ಆಗಿದೆ. ಅವಳಿ ಜಿಲ್ಲೆಗಳ ಜನರು, ಜಾನುವಾರುಗಳು, ಜಮೀನು ಈ ಜಲಾಶಯದ ಮೇಲೆ ಅವಲಂಬಿತವಾಗಿವೆ. 123 ಟಿಎಂಸಿ ಸಾಮರ್ಥ್ಯ ಇರುವ ಈ ಜಾಲಾಶಯದಲ್ಲಿ ಸದ್ಯ ಬಳಕೆಗೆ ಇರೋದು ಕೇವಲ 4 ಟಿಎಂಸಿ ನೀರು. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಅವಳಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯೂ ಕಷ್ಟ ಆಗಲಿದೆ. ಮಹಾರಾಷ್ಟ್ರದಲ್ಲಿ ಮಳೆ ಆದ್ರೆ ನೀರು ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ಕೃಷ್ಣಾ ನದಿ ವಿಜಯಪುರ-ಬಾಗಲಕೋಟೆ ಜಿಲ್ಲೆಗಳನ್ನು ಭೌಗೋಳಿಕವಾಗಿ ವಿಭಜಿಸಿದರೂ ದಡದಲ್ಲಿರುವ ಸಾವಿರಾರು ಕುಟುಂಬಗಳ ಬದುಕನ್ನು ಒಂದೇ ದಾರಿಯಲ್ಲಿ ಕಟ್ಟಿ ಹಾಕಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಿಂದ ನಾರಾಯಣಪುರ ಜಲಾಶಯದವರೆಗೆ ಸುಮಾರು 5 ಸಾವಿರಕ್ಕೂ ಅಧಿಕ ಕುಟುಂಬಗಳು ಮೀನುಗಾರಿಕೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿವೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಸುಮಾರು 48 ಸಾವಿರ ಹೆಕ್ಟೇರ್ ಹಾಗೂ ಮುಂಭಾಗದಲ್ಲಿ 14 ಸಾವಿರ ಹೆಕ್ಟೇರ್ ಜಲಪ್ರದೇಶವಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 400 ಅಧಿಕೃತ ಪರವಾನಿಗೆ ಪಡೆದ ಮೀನುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ರೆ ಇವರೆಲ್ಲ ಇದೀಗ ಅಕ್ಷರ ಸಹ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ

ಆಲಮಟ್ಟಿ ಜಲಾಶಯ ಖಾಲಿ ಆದ ಕಾರಣ ಮೀನುಗಳಿಗೆ ಬರ ಉಂಟಾಗಿದೆ. ಇದರಿಂದ ಮೀನುಗಾರರು ತಮ್ಮ ತೆಪ್ಪಗಳನ್ನು ದಂಡೆಗೆ ಹಾಕಿ ನಿರುದ್ಯೋಗಿಗಳಾಗಿದ್ದಾರೆ. ಜಿಲ್ಲೆಯ ಕೊಲ್ಹಾರ, ಬಳೂತಿ, ಗಣಿ, ಚಿಮ್ಮಲಗಿ, ಆಲಮಟ್ಟಿ, ಆರಳಿದಿನ್ನಿ, ಕಾಶೀನಕುಂಟಿ, ಯಲಗೂರು, ಯಲ್ಲಮನ ಬೂದಿಹಾಳ ಸೇರಿದಂತೆ ಹಲವು ಗ್ರಾಮಗಳ ಮೀನುಗಾರರು ನದಿಯನ್ನೇ ಅವಲಂಬಿಸಿದ್ದಾರೆ. ಜೂನ್‌ನಲ್ಲೇ ಆಲಮಟ್ಟಿ ಜಲಾಶಯ ಅರ್ಧದಷ್ಟು ಭರ್ತಿ ಆಗುತ್ತಿತ್ತು. ಇದರಿಂದ ಮೀನುಗಳು ದಂಡೆಗೆ ಹರಿದು ಬರುತ್ತಿದ್ದವು. ಆದ್ರೆ ಈ ಬಾರಿ ಜುಲೈನಲ್ಲಿ ಒಳಹರಿವು ಇಲ್ಲದೇ ಜಲಾಶಯ ಖಾಲಿಯಾಗಿ ಮೀನುಗಳಿಗೆ ಬರ ಬಂದಿದೆ.

ಒಟ್ಟಿನಲ್ಲಿ ಜಲಾಶಯಕ್ಕೆ ಒಳಹರಿವು ಇಲ್ಲದೇ ಜಿಲ್ಲೆಯ ಜನರ ಕುಡಿಯುವ ನೀರಿಗೆ, ರೈತರ ಬೆಳೆಗೆ ಬರ ಬಂದ್ರೆ, ಇನ್ನೊಂದೆಡೆ ಮೀನುಗಳಿಗೆ ಬರ ಬಂದಿದೆ.


Spread the love

About Laxminews 24x7

Check Also

ಬರ ಪರಿಸ್ಥಿತಿ ಗಂಭೀರವಾಗ್ತಿದೆ, ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ – ರೈತರಿಗೆ ಡಿಕೆಶಿ ಮನವಿ

Spread the loveಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗ್ತಿದೆ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ