Breaking News

ಬೀದರ್‌ನಲ್ಲಿ ಮಾಯವಾದ ವರುಣ ದೇವ – 57 ಕೆರೆಗಳು ಖಾಲಿ, ಹನಿ ನೀರಿಗೆ ಹಾಹಾಕಾರ

Spread the love

ಬೀದರ್: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೀದರ್‌ ಜಿಲ್ಲೆಯ ಕೆರೆ-ಕಟ್ಟೆಗಳು ಬರಿದಾಗುತ್ತಿವೆ. ಇದರ ಪರಿಣಾಮ ಈಗಾಗಲೇ ಕೃಷಿ ಚಟುವಟಿಕೆಗಳ ಮೇಲೆ ಗೋಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಅಂತರ್ಜಲ ಮಟ್ಟ ಹಾಗೂ ಗ್ರಾಮೀಣ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 125 ಕೆರೆಗಳಿದ್ದು, 2,958 ಎಂಸಿಎಫ್‌ಟಿ ನೀರಿನ ಸಾಮರ್ಥ್ಯ‌ ಹೊಂದಿವೆ. ಒಟ್ಟಾರೆ 21 ಸಾವಿರ ಹೆಕ್ಟೇರ್‌ಗಳಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಆದರೆ, ಅವುಗಳ ಪೈಕಿ 57 ಕೆರೆಗಳ ಒಡಲು ಬತ್ತಿ ಬಾಯ್ತೆರೆದಿವೆ. ಇಲಾಖೆಯ ಪ್ರಕಾರ ಈವರೆಗೆ ಶೇ 30ರಷ್ಟು ನೀರು ತುಂಬಿರುವ ಕೆರೆಗಳ ಸಂಖ್ಯೆ 60, ಇನ್ನು 7 ಕೆರೆಗಳಲ್ಲಿ ಶೇ 50ರಷ್ಟು ನೀರು ತುಂಬಿದೆ. ಗ್ರಾಮೀಣ ಕೆರೆಗಳು ಬತ್ತಿರುವುದರಿಂದ ಜನ-ಜಾನುವಾರು ಅಷ್ಟೇ ಅಲ್ಲದೆ ಕೃಷಿ ಚಟುವಟಿಕೆಗಳಿಗೂ ಸಮಸ್ಯೆಯಾಗಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ.

ತಾತ್ಕಾಲಿಕ ಪರಿಹಾರ ಕ್ರಮಗಳಿಗಿಂತ ಕೆರೆಗಳ ಪುನರುಜ್ಜೀವನ, ಹೂಳು ತೆರವು, ಒತ್ತುವರಿ ತೆರವು, ನೀರು ಹರಿದು ಬರುವ ಕಾಲುವೆಗಳ ದುರಸ್ತಿ ಹಾಗೂ ವಿಬಿ-ಜಿ ರಾಮ್‌ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತಹ ಶಾಶ್ವತ ಕ್ರಮಗಳನ್ನು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣ ಕೈಗೊಳ್ಳಬೇಕಿದೆ.

ಬೀದರ್‌ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಜಿಲ್ಲಾದ್ಯಂತ ಭೀಕರ ಬರದ ಛಾಯೆ‌ ಆವರಿಸತೊಡಗಿದೆ. ಮಳೆಗಾಲ ಆರಂಭವಾಗಿ ಎರಡೂವರೆ ತಿಂಗಳು ಕಳೆಯುತ್ತಿದ್ದರೂ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿಲ್ಲ. ಬರಿದಾದ ಕೆರೆ-ಕಟ್ಟೆಗಳಿಂದ ಅಂತರ್ಜಲ ಪಾತಾಳಕ್ಕಿಳಿದು ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಬರ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.

ವಾಡಿಕೆಯಂತೆ ಮಳೆಯಾಗಿದ್ದರೆ ಇಷ್ಟೊತ್ತಿಗಾಗಲೇ ಕೆರೆಗಳು ತುಂಬಿ ತುಳಕುತ್ತಿದ್ದವು. ಅದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಲಭ್ಯವಾಗುತ್ತಿತ್ತು. ಮಳೆಯಾಶ್ರಿತ ಬೆಳೆಗಳು ಹುಲುಸಾಗಿ ಬೆಳೆದು ಹಸಿರಿನಿಂದ ನಳನಳಿಸುತ್ತಿದ್ದವು. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ. ಕೆಲ ವರ್ಷಗಳಿಂದ ಈ ಪ್ರಮಾಣದಲ್ಲಿ ಬರ ಪರಿಸ್ಥಿತಿ ಕಾಡಿರಲಿಲ್ಲ. ಕಳೆದ ವರ್ಷವೂ ಮಳೆ ಉತ್ತಮವಾಗಿದ್ದ ಕಾರಣ ಬಹುತೇಕ ಕೆರೆಗಳ ಒಡಲು ತುಂಬಿಕೊಂಡಿದವು. ಕೆಲವೆಡೆ ಭಾರೀ ಮಳೆಯಿಂದಾಗಿ ಕೆರೆಗಳ ಕೋಡಿ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಬೆಳೆ ಬೆಳೆಯದ ಘಟನೆಗಳು ಜರುಗಿದವು.

ಮಣ್ಣಿನಡಿಯಿಂದ ಹೊರಬಂದ ಜೀವಗಳಿಗೆ ಮುಂಗಾರು ಪೂರ್ವದಲ್ಲಿ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿ ಬೊಬ್ಬಿರಿದ ಮಳೆ ಜೂನ್‌ ವೇಳೆಗೆ ಮುನಿಸಿಕೊಂಡಿತು. ಇದರಿಂದ ಮುಂಗಾರು ಬಿತ್ತನೆಗೆ ಭಾರೀ ಹಿನ್ನಡೆಯಾಗಿ ರೈತರು ಚಿಂತೆಗೀಡಾದರು. ಜುಲೈ ಮೊದಲ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯಿಂದ ಸಂತಸಗೊಂಡ ರೈತರು ಭೂಮಿ ಒಡಲಿಗೆ ಉಡಿ ತುಂಬಲು ಶುರು ಮಾಡಿದರು. ಆದರೂ, ಈ ಸಲ ಮುಂಗಾರು ಬಿತ್ತನೆಗಾಗಿ ಹದಗೊಂಡಿದ್ದ ಕೃಷಿ ಭೂಮಿಯಲ್ಲಿ ವಾಡಿಕೆಯಂತೆ ಬಿತ್ತನೆ ಗುರಿ ತಲುಪಲು ಸಾಧ್ಯವಾಗಿಲ್ಲ. ಮೊಳಕೆಯೊಡೆದ ಸಸಿಗಳು ಮಳೆಯ ಕೊರತೆಯಿಂದ ಬಾಡಲಾರಂಭಿಸಿವೆ. ಈಗಲೂ ಎಲ್ಲೆಡೆ ಮಳೆಯ ಕೊರತೆಯ ಮಾತುಗಳು ಜನಜನಿತವಾಗಿದ್ದು, ಅನ್ನದಾತರಲ್ಲಿ ಆತಂಕ ಸೃಷ್ಟಿಸಿದೆ.


Spread the love

About Laxminews 24x7

Check Also

ಮನೆಯ ಮೇಲ್ಛಾವಣಿ ಹಂಚು ಮುರಿದು ಕಳ್ಳತನ; ಬಡ ಕುಟುಂಬ ಕಣ್ಣೀರು

Spread the loveಗದಗ: ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಊರಿಗೆ ಹೋಗಿದ್ದ ವೇಳೆ ಮೇಲ್ಛಾವಣಿಯ ಹಂಚು ಮುರಿದು ಒಳಗೆ ನುಗ್ಗಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ