ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಸರ್ಕಾರದ ‘ಜಿರೋ ಟಾಲರೆನ್ಸ್’ ನೀತಿ ಹಾಗೂ ಕಠಿಣ ಪೊಲೀಸ್ ಕ್ರಮಗಳ ಭಯ ಅಪರಾಧ ಲೋಕವನ್ನು ಯಾವ ಮಟ್ಟಿಗೆ ನಡುಗಿಸಿದೆ ಎಂಬುದಕ್ಕೆ ಗಾಜಿಯಾಬಾದ್ನಲ್ಲಿ ನಡೆದ ಈ ನಾಟಕೀಯ ಘಟನೆಯೇ ಸಾಕ್ಷಿ. ಇತ್ತೀಚೆಗೆ ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ರೌಡಿಶೀಟರ್ಗಳು “ಯೋಗಿ ಜೀ ನಮ್ಮನ್ನು ಕ್ಷಮಿಸಿ” ಎಂಬ ಪೋಸ್ಟರ್ಗಳನ್ನು ಹಿಡಿದು ಬಹಿರಂಗವಾಗಿಯೇ ಪೊಲೀಸರ ಮುಂದೆ ಶರಣಾಗಿದ್ದಾರೆ.
ಗಾಜಿಯಾಬಾದ್ನಲ್ಲಿ ಇತ್ತೀಚೆಗೆ ಹದಿಹರೆಯದ ಯುವಕನೊಬ್ಬನ ಭೀಕರ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅಪರಾಧಿಗಳ ಸದ್ದಡಗಿಸಲು ‘ಆಪರೇಷನ್ ಕ್ಲೀನ್ ಸ್ವೀಪ್’ ಎಂಬ ವಿಶೇಷ ಪರಿಶೀಲನಾ ಅಭಿಯಾನವನ್ನು ಕೈಗೊಂಡಿದ್ದರು. ಟ್ರಾನ್ಸ್-ಹಿಂದನ್ ವಲಯದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಧವಲ್ ಜೈಸ್ವಾಲ್ ನೇತೃತ್ವದಲ್ಲಿ ಜಿಲ್ಲೆಯ ಹಳೆಯ ಅಪರಾಧಿಗಳ ಪತ್ತೆ ಕಾರ್ಯ ನಡೆಸಲಾಗಿತ್ತು.
ಪೊಲೀಸರ ಅಭಿಯಾನದ ಭಾಗವಾಗಿ ಪೊಲೀಸರು ಇತ್ತೀಚೆಗೆ ಸುಮಾರು 150 ರೌಡಿಶೀಟರ್ಗಳನ್ನು ಸಾಮಾನ್ಯ ವಿಚಾರಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕರೆಯಿಸಿದ್ದರು. ಆದರೆ ಯೋಗಿ ಸರ್ಕಾರದ ಬುಲ್ಡೋಜರ್ ಮತ್ತು ಎನ್ಕೌಂಟರ್ ಕ್ರಮಗಳ ಭೀತಿಯಲ್ಲಿದ್ದ ಅಪರಾಧಿಗಳು, ತಾವಾಗಿಯೇ ಸ್ವಯಂಪ್ರೇರಿತರಾಗಿ ಕೈಯಿಂದ ಬರೆದ ಪೋಸ್ಟರ್ಗಳನ್ನು ಹಿಡಿದುಕೊಂಡು ಠಾಣೆಗೆ ಬಂದಿದ್ದರು.
ಅವರು ತಂದಿದ್ದ ಪೋಸ್ಟರ್ಗಳಲ್ಲಿ ಹಿಂದಿಯಲ್ಲಿ, “ಯೋಗಿ ಜೀ, ಮುಝೆ ಮಾಫ್ ಕರ್ ದೋ. ಮೈ ಭವಿಷ್ಯ ಮೇ ಕೋಯಿ ಅಪ್ರಾದ್ ನ ಕರ್ನೆ ಕೀ ಶಪಥ್ ಲೇತಾ ಹೂ” (ಯೋಗಿ ಜೀ, ನನ್ನನ್ನು ಕ್ಷಮಿಸಿ. ನಾನು ಭವಿಷ್ಯದಲ್ಲಿ ಯಾವುದೇ ಅಪರಾಧ ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ) ಎಂದು ಬರೆಯಲಾಗಿತ್ತು. ಯುವಕರು ಮತ್ತು ಮಧ್ಯವಯಸ್ಕರಾಗಿದ್ದ ಈ ರೌಡಿಶೀಟರ್ಗಳೆಲ್ಲರೂ ಕ್ಯಾಮೆರಾಗಳ ಮುಂದೆ ಸಾಲಾಗಿ ನಿಂತು, ಕೈಗಳನ್ನು ಮೇಲಕ್ಕೆತ್ತಿ “ಇನ್ಮುಂದೆ ಯಾವುದೇ ಕಾನೂನುಬಾಹಿರ ಕೃತ್ಯ ಎಸಗುವುದಿಲ್ಲ” ಎಂದು ಪ್ರಮಾಣ ಮಾಡಿದರು.
ಕ್ಷಮೆ ಕೇಳಿದ ತಕ್ಷಣ ಅಪರಾಧಿಗಳ ಮೇಲಿರುವ ಹಳೆಯ ಪ್ರಕರಣಗಳು ರದ್ದಾಗುವುದಿಲ್ಲ. ಸದ್ಯಕ್ಕೆ ಈ ಎಲ್ಲಾ 150 ರೌಡಿಶೀಟರ್ಗಳ ಪ್ರಸ್ತುತ ವಿವರಗಳು ಮತ್ತು ಇತ್ತೀಚಿನ ಚಟುವಟಿಕೆಗಳನ್ನು ನಮ್ಮ ಡೇಟಾಬೇಸ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಭವಿಷ್ಯದಲ್ಲಿ ಇವರು ಯಾವುದೇ ಸಣ್ಣ ತಪ್ಪು ಮಾಡಿದರೂ ಅತ್ಯಂತ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಧವಲ್ ಜೈಸ್ವಾಲ್ ಎಚ್ಚರಿಕೆ ನೀಡಿದ್ದಾರೆ.
ಅಪರಾಧಿಗಳು ಸಾಲಾಗಿ ನಿಂತು ಪೋಸ್ಟರ್ ಹಿಡಿದು ಕ್ಷಮೆ ಯಾಚಿಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಕಠಿಣ ಕಾನೂನು ಸುವ್ಯವಸ್ಥೆಯ ನೀತಿಯಿಂದಾಗಿ ಅಪರಾಧ ಲೋಕ ಹೇಗೆ ನಡುಗುತ್ತಿದೆ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Laxmi News 24×7