ಬೆಂಗಳೂರು: ಒಂದು ಕಡೆ ನನಗೆ ಮಂತ್ರಿಯಾಗಿ ಜವಾಬ್ದಾರಿ ಸಿಕ್ಕಿರುವುದಕ್ಕೆ ಖುಷಿಯಿದೆ. ಆದರೆ ಇನ್ನೊಂದೆಡೆ ಅಷ್ಟೇ ದುಃಖವೂ ಸಹ ಕಾಡುತ್ತಿದೆ ಎಂದು ಸಚಿವ ಯತೀಂದ್ರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅವಧಿ ಪೂರೈಸುತ್ತಾರೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗದೇ ಇರುವುದು ನನಗೆ ವೈಯಕ್ತಿಕವಾಗಿ ತೀವ್ರ ದುಃಖ ತಂದಿದೆ. ಈಗ ಅವರ ಸ್ಥಾನದ ಬದಲು ನನಗೆ ಈ ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದರು.
ಇಂದು ಮೊದಲ ಕ್ಯಾಬಿನೆಟ್ ಮೀಟಿಂಗ್ ಯಶಸ್ವಿಯಾಗಿ ನಡೆದಿದೆ. ಆದರೆ, ನಿಯಮಗಳ ಪ್ರಕಾರ ಕ್ಯಾಬಿನೆಟ್ನಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಸಭೆಯಿಂದ ಹೊರಗಡೆ ಅಧಿಕೃತವಾಗಿ ಹೇಳಲು ನನಗೆ ಸಾಧ್ಯವಿಲ್ಲ. ಎಲ್ಲವನ್ನೂ ಸಿಎಂ ಹಾಗೂ ಡಿಸಿಎಂ ಅವರು ಹೇಳಲಿದ್ದಾರೆ ಎಂದು ತಿಳಿಸಿದರು.
ಇನ್ನು ತಮಗೆ ಸಿಗಲಿರುವ ಖಾತೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಪಕ್ಷದ ವರಿಷ್ಠರು ಯಾವ ಖಾತೆಯನ್ನು ನೀಡಿದ್ರೂ ಸಹ ಅದನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಂಪೂರ್ಣವಾಗಿ ಪಕ್ಷದ ಹಿರಿಯ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
Laxmi News 24×7