ಬೆಂಗಳೂರು: ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ರಾಜ್ಯದಲ್ಲಿ 6,000 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಬುಧವಾರ (ಮೇ 20) ಖನಿಜ ಭವನದಲ್ಲಿ ಕಂಪನಿಯ ಉನ್ನತಾಧಿಕಾರಿಗಳ ಜೊತೆಗೆ ನಡೆದ ವಿಸ್ತೃತ ಸಮಾಲೋಚನೆಯ ನಂತರ ಸಚಿವರು ಈ ಮಾಹಿತಿ ನೀಡಿದ್ದಾರೆ. 200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್‌ನ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದಿದ್ದಾರೆ.
ಕಂಪನಿಯು ಹಂತ ಹಂತವಾಗಿ ಒಟ್ಟು 6,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷವಾಗಿ 20 ಸಾವಿರ ಹಾಗೂ ಪರೋಕ್ಷವಾಗಿ 54 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಷಿಪಣಿ ತಯಾರಿಕೆಯ ಪೂರಕ ಸೌಲಭ್ಯ, ರೇಡಾರ್-ಸಂವೇದಕ, ಯುದ್ಧ ವಿಮಾನಗಳ ದುರಸ್ತಿ – ನಿರ್ವಹಣೆ ಸೌಲಭ್ಯ (ಎಂಆರ್‌ಒ) ಸೇರಿದಂತೆ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಂಪನಿ ಉದ್ದೇಶಿಸಿದೆ. ಮೊದಲ ಹಂತದಲ್ಲಿ ₹1,290 ಕೋಟಿ ರೂ., 2ನೇ ಹಂತದಲ್ಲಿ 2,898 ಕೋಟಿ ರೂ. ಮತ್ತು 3ನೇ ಹಂತದಲ್ಲಿ 1,512 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ ಎಂದು ವಿವರಿಸಿದ್ದಾರೆ.
ಈ ಯೋಜನೆ ಕಾರ್ಯಗತಗೊಳಿಸಲು ಕಂಪನಿಯು ದೇವನಹಳ್ಳಿ ಬಳಿ ಭೂಮಿ ಒದಗಿಸಲು ಮನವಿ ಮಾಡಿಕೊಂಡಿದೆ. 1.8 ಕಿ.ಮೀ ಉದ್ದದ ರನ್ ವೇ ನಿರ್ಮಾಣದ ಉದ್ದೇಶ ಕೂಡ ಇದೆ ಎಂದು ಕಂಪನಿ ಹೇಳಿದ್ದು, ಹಾಗಾದರೆ ಹಾಸನ, ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಬೇಕಾದರೂ ಪರಿಗಣಿಸಬಹುದು ಎಂದು ಸಲಹೆ ನೀಡಿದ್ದಾರೆ. ಹಾಲಿ ಇರುವ ದೇವನಹಳ್ಳಿ ಘಟಕದ ಸನಿಹದಲ್ಲೇ ಈ ಉದ್ದೇಶಿತ ಘಟಕ ಇರಬೇಕು ಎನ್ನುವ ಬೇಡಿಕೆಯನ್ನು ಸಂಸ್ಥೆ ಪ್ರತಿನಿಧಿಗಳು ತಿಳಿಸಿದ್ದು, ಸಚಿವರು ರನ್ ವೇ ನಿರ್ಮಾಣಕ್ಕೂ ಅನುಕೂಲ ಇರುವ ಕಡೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯಲ್, ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಆ್ಯಕ್ಸಿಸ್‌ಕೇಡ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಾರಧಿ ಚಂದ್ರ ಬಾಬು, ನಿರ್ದೇಶಕ ಸುರೇಶ ಕುಮಾರ್, ಪ್ರಧಾನ ವ್ಯವಸ್ಥಾಪಕ (ಪ್ರಾಜೆಕ್ಟ್ಸ್) ಎನ್.ಕೆ.ಸತೀಶ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Laxmi News 24×7