ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನತೆ, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯ ಹಿನ್ನೆಲೆ ದೇಶದಲ್ಲಿ ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ವಿಶೇಷ ಭದ್ರತಾ ಪಡೆ ಬಳಸುವ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತಗೊಳಿಸಲು ಅವರು ಸೂಚನೆ ನೀಡಿದ್ದಾರೆ.
ಮಿತವ್ಯಯ ಕ್ರಮಗಳ ಭಾಗವಾಗಿ ಇತ್ತೀಚೆಗೆ ನಡೆದ ಗುಹಾವಾಟಿ ಹಾಗೂ ವಡೋದರಾ ಭೇಟಿಗಳಲ್ಲೂ ಕಡಿಮೆ ವಾಹನಗಳಲ್ಲಿಯೇ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ಮೂಲಕ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ, ಸರ್ಕಾರವೂ ಮಿತವ್ಯಯ ಕ್ರಮಗಳನ್ನು ಅನುಸರಿಸುತ್ತಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.
ಇದಲ್ಲದೆ, ಪ್ರಧಾನಿ ಭದ್ರತೆಗಾಗಿ ಬಳಸುವ ಕೆಲವು ವಿಶೇಷ ಬೆಂಗಾವಲು ವಾಹನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಸಹ ಅನುಮತಿ ನೀಡಲಾಗಿದೆ. ಇಂಧನ ಬಳಕೆಯನ್ನು ಕಡಿಮೆ ಮಾಡುವ ಜೊತೆಗೆ ಪರಿಸರ ಸ್ನೇಹಿ ಕ್ರಮಗಳಿಗೂ ಸರ್ಕಾರ ಒತ್ತು ನೀಡುತ್ತಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿಗಳ ಕಚೇರಿ ಪ್ರಧಾನಿ ಮೋದಿ ಭಾಷಣದ ಪ್ರತಿಗಳನ್ನು ಹಂಚಿಕೆ ಮಾಡಿದೆ. ಅದರಲ್ಲಿ ಪ್ರಸ್ತುತ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ಅನುಸರಿಸಬೇಕಾದ ಮಿತವ್ಯಯ ಕ್ರಮಗಳು ಮತ್ತು ಕಾರ್ಯಯೋಜನೆಗಳ ಕುರಿತು ವಿವರಿಸಲಾಗಿತ್ತು ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಕಾರ್ಯಯೋಜನೆಯಲ್ಲಿ ನಾಗರಿಕರಿಗೆ ಎಲೆಕ್ಟ್ರಿಕ್ ವಾಹನಗಳ ಹೆಚ್ಚುವರಿ ಬಳಕೆ, ಅನಗತ್ಯ ಇಂಧನ ಬಳಕೆ ಕಡಿತ ಹಾಗೂ ಅಗತ್ಯವಿಲ್ಲದ ಪ್ರಯಾಣಗಳನ್ನು ತಪ್ಪಿಸುವಂತೆ ಕರೆ ನೀಡಲಾಗಿದೆ. ಸಭೆಗಳು ಮತ್ತು ಅಧಿಕೃತ ಕಾರ್ಯಗಳನ್ನು ಸಾಧ್ಯವಾದಷ್ಟು ಆನ್‌ಲೈನ್ ಮೂಲಕ ನಡೆಸುವಂತೆ ಸೂಚಿಸಲಾಗಿದೆ. ಪಶ್ಚಿಮ ಏಷ್ಯಾದ ಅಸ್ಥಿರತೆಯಿಂದ ಉಂಟಾದ ಜಾಗತಿಕ ಆರ್ಥಿಕ ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಆಡಳಿತದ ಕಾರ್ಯಕ್ಷಮತೆ ಮತ್ತು ಭದ್ರತಾ ಮಾನದಂಡಗಳನ್ನು ಕಾಪಾಡಿಕೊಂಡೇ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಪ್ರಾಯೋಗಿಕ ಮಿತವ್ಯಯ ಕ್ರಮಗಳನ್ನು ಅನುಸರಿಸಬೇಕು ಎಂಬುದು ಪ್ರಧಾನಿ ಮೋದಿ ಆಶಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮಗಳ ಪರಿಣಾಮ ಈಗಾಗಲೇ ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ಹಲವು ನಾಯಕರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದ್ದಾರೆ.
Laxmi News 24×7