ಬಾಗಲಕೋಟೆ: ರೋಗಿಗಳ ಪಾಲಿಗೆ ಆಸರೆಯಾಗಬೇಕಿದ್ದ ಆಸ್ಪತ್ರೆಯೇ ಈಗ ಮಹಿಳೆಯರಿಗೆ ಸುರಕ್ಷಿತವಲ್ಲದಂತಾಗಿದೆ. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರನ ಆರೈಕೆಗಾಗಿ ಬಂದಿದ್ದ ಮಹಿಳೆಯ ಮೇಲೆ ಆಸ್ಪತ್ರೆಯ ಹೊರಗುತ್ತಿಗೆ ನೌಕರನೊಬ್ಬ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಸಂತ್ರಸ್ತ ಮಹಿಳೆಯ ಸಹೋದರ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೈಕೆಗಾಗಿ ಈ 34 ವರ್ಷದ ಮಹಿಳೆ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗುತ್ತಿಗೆ ನೌಕರ ಫರೀದ್ ಸಾಬ್ ಡಾಂಗೆ ಎಂಬಾತ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದನು.
ತಡರಾತ್ರಿ ಬೆದರಿಕೆ ಹಾಕಿ ಕೃತ್ಯ:
ಮೇ 4ರ ತಡರಾತ್ರಿ ಸುಮಾರು 12 ರಿಂದ 2 ಗಂಟೆಯ ಅವಧಿಯಲ್ಲಿ, ಯಾರು ಇಲ್ಲದ ಸಮಯ ಸಾಧಿಸಿದ ಆರೋಪಿ ಫರೀದ್, ಮಹಿಳೆಗೆ ಪ್ರಾಣ ಬೆದರಿಕೆ ಹಾಕಿ ಬಾತ್‌ರೂಮ್‌ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಕೃತ್ಯದ ನಂತರ ಮಹಿಳೆಯನ್ನು ಹೊರಬರದಂತೆ ಲಾಕ್ ಮಾಡಿ ತನ್ನ ಕೆಲಸಕ್ಕೆ ಮರಳಿದ್ದಾನೆ.
ಆರೋಪಿ ಕೆಲಸದಿಂದ ವಜಾ, ಪೊಲೀಸ್ ವಶಕ್ಕೆ;
ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕುಟುಂಬಸ್ಥರು ಆರೋಪಿಯನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ್ ಕೋಣಿ ಅವರು ಆರೋಪಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿ ಆದೇಶಿಸಿದ್ದಾರೆ.
Laxmi News 24×7