Breaking News

ರಾಜೀನಾಮೆ ನೀಡದ ಮಮತಾ ಸರ್ಕಾರವೇ ವಜಾ

Spread the love

ಕೋಲ್ಕತ್ತಾ: ರಾಜೀನಾಮೆ ನೀಡದೇ ಭಾರೀ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನೇ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್‌ಎನ್‌ ರವಿ ವಜಾಗೊಳಿಸಿದ್ದಾರೆ.

2026ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್  ಸೋಲನ್ನನುಭವಿಸಿದರೂ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಮೊಂಡಾಟ ಮುಂದುವರಿಸಿದ್ದರು.

ಟಿಎಂಸಿಗೆ ಸೋಲಾಗಿಲ್ಲ, ಚುನಾವಣಾ ಆಯೋಗದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಗಳಿಸಿದೆ. ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ ಎಂದು ಸವಾಲು ಎಸೆದಿದ್ದರು.

ಭಾರತದ ಸಂವಿಧಾನದ 172ನೇ ವಿಧಿಯ ಪ್ರಕಾರ, ವಿಧಾನಸಭೆಯು ತನ್ನ ಮೊದಲ ಸಭೆಯಿಂದ ಐದು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಅದರಂತೆ 2021ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಭೆಯ ಅವಧಿಯು ಇಂದು ಪೂರ್ಣಗೊಂಡಿದ್ದು 17ನೇ ವಿಧಾನಸಭೆ ಅವಧಿ ಅಧಿಕೃತವಾಗಿ ಅಂತ್ಯಗೊಂಡಿದೆ.

ಅಂತ್ಯಗೊಂಡ ಬೆನ್ನಲ್ಲೇ ಆರ್‌ಎನ್‌ ರವಿ ಅವರು ಸಂವಿಧಾನದ 164(1)ನೇ ವಿಧಿಯಡಿ ಮೇ 07 ರಿಂದ ಜಾರಿಗೆ ಬರುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

ಈ ಅವಧಿ ಮುಕ್ತಾಯದೊಂದಿಗೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ 294 ಶಾಸಕರ ಸದಸ್ಯತ್ವವು ಅಧಿಕೃತವಾಗಿ ರದ್ದಾಗಿದೆ. ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರೂ ಸಹ ಸಂವಿಧಾನದ ನಿಯಮದಂತೆ ಅವರು ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ

ಈ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಸುಮಾರು 15 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ರಾಜ್ಯಪಾಲರು ಈಗ ಚುನಾವಣೆಯಲ್ಲಿ ಬಹುಮತ ಸಾಧಿಸಿರುವ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಲಿದ್ದಾರೆ. ಮೇ 9ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ.


Spread the love

About Laxminews 24x7

Check Also

ಅಮಾನತುಗೊಂಡಿದ್ದ ಲೇಡಿ ತಹಶೀಲ್ದಾರ್ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು: ವಜ್ರ, ಚಿನ್ನ, ಫ್ಲಾಟ್‌ಗಳು ಪತ್ತೆ, ಎಸಿಬಿ ಅಧಿಕಾರಿಗಳೇ ಶಾಕ್

Spread the loveಹೈದರಾಬಾದ್: ಅಮಾನತುಗೊಂಡಿದ್ದ ತಹಶೀಲ್ದಾರ್ ಮತ್ತು ಜಂಟಿ ಸಬ್​ ರಿಜಿಸ್ಟ್ರಾರ್ ತುಮ್ಮಕೊಮ್ಮ ಸುಚರಿತ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ