ಬಾಗಲಕೋಟೆ: ಇಲ್ಲಿನ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ನಿನ್ನೆ ಕಾಲೇಜು ಕ್ಯಾಂಪಸ್ಸಿಗೆ ಹೋಗಿ ನೀವು ಬಿಜೆಪಿಗೆ ಮತ ಕೊಟ್ಟರೆ ಜೈಲಿಗೆ ಹಾಕುತ್ತೇವೆ ಎಂಬ ಮಾಹಿತಿಯುಳ್ಳ ಒಂದು ಕರಪತ್ರವನ್ನು ಹಂಚಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು. ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಪೊಲೀಸರಿಗೆ ದೂರು ನೀಡಿದ್ದು, ಅವರನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.
ಪೊಲೀಸ್ ಠಾಣೆಯಲ್ಲೇ ಅವರು ಲೈವ್ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇನ್ಸ್ಪೆಕ್ಟರ್ ಬಾಯಿ ಮುಚ್ಚಿ ಆರಾಮವಾಗಿ ಕುಳಿತಿದ್ದರು ಎಂದು ಟೀಕಿಸಿದರು. ಬಂಧಿತರು ಲಾಕಪ್ ಒಳಗಡೆ ಇರಬೇಕಿತ್ತು. ಆದರೆ, ರಾಜಾರೋಷವಾಗಿ ಲೈವ್ ಬಂದಿದ್ದಾರೆ. ಕರ್ನಾಟಕದಲ್ಲಿ ಗೂಂಡಾ ರಾಜ್ಯ ಇದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿನವರು ಡಿ.ಕೆ.ಶಿವಕುಮಾರ್ ಹೇಳಿದ ಮಾದರಿಯಲ್ಲಿ ಬಂದು ಗೂಂಡಾಗಿರಿ ಮಾಡಿದ್ದಾರೆ ಎಂದು ದೂರಿದರು. ಡಿ.ಕೆ.ಶಿವಕುಮಾರ್ ಅವರೇ ಈ ಘಟನೆಗೆ ನೇರ ಕಾರಣ ಎಂದು ಆಕ್ಷೇಪಿಸಿದರು. ನಾಳೆ ಹಳ್ಳಿಗಳಲ್ಲೂ ಈ ಥರ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ನೂರಾರು ಕೋಟಿ ಹಣ ಹಂಚಲು ಸಿದ್ಧತೆ
ನೂರಾರು ಕೋಟಿ ಹಣ ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿನವರು ಅಭಿವೃದ್ಧಿ- ಜನಪರ ಕೆಲಸ ಮಾಡಿಲ್ಲ. ಆದ್ದರಿಂದ ಹಣ ಹಂಚಿ ಗೆಲ್ಲಲು ಹೊರಟಿದ್ದಾರೆ ಎಂದು ಟೀಕಿಸಿದರು. ಹೀಗಾದರೆ ನ್ಯಾಯಯುತ ಚುನಾವಣೆ ಆಗುವುದು ಹೇಗೆ ಎಂದು ಕೇಳಿದರು.
Laxmi News 24×7