ಬೆಂಗಳೂರು: ಬರೋಬ್ಬರಿ 18 ವರ್ಷ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಅಣಿಯಾಗಿದೆ. ಕಳೆದ ವರ್ಷದ ಭೀಕರ ಕಾಲ್ತುಳಿತ ಬಳಿಕ ಮತ್ತೆ ನಗರದಲ್ಲಿ ಕ್ರಿಕೆಟ್ ರಂಗೇರುತ್ತಿದೆ. ಆದ್ರೆ ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾದ ದುರಂತದಿಂದ ಎಚ್ಚೆತ್ತಿರುವ ಬೆಂಗಳೂರು ಪೊಲೀಸರು, ಈ ಸಲ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದ್ದಾರೆ. ಇಂದು ಮೊದಲ ಪಂದ್ಯದಲ್ಲಿ ಆರ್‌ಸಿಬಿ vs ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಮೊದಲ ಟೂರ್ನಿ ಇದಾಗಿರುವುದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಭದ್ರತೆಗೆ 2,000 ಪೊಲೀಸರನ್ನ ನಿಯೋಜಿಸಲಾಗಿದೆ. ಈ ಪೈಕಿ 7 ಸ್ಪೆಷಲ್ ಸ್ಕ್ವಾಡ್‌ಗಳನ್ನ ಮಾಡಲಾಗಿದೆ. ಪಶ್ಚಿಮ ವಯಲಯದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನೀಡಲಾಗುತ್ತಿದೆ. ಈಗಾಗಲೇ ಭದ್ರತೆ ಬಗ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಇಂದು ಮಧ್ಯಾಹ್ನದಿಂದ ಪೊಲೀಸರು ನಿಯೋಜಿತ ಸ್ಥಳಗಳಲ್ಲಿ ಬಂದೋಬಸ್ತ್ ನೀಡಲಿದ್ದಾರೆ. ಈ ಬಾರಿ ಟೂರ್ನಿ 2 ತಿಂಗಳಿಗೂ ಹೆಚ್ಚು ಕಾಲ ಇರಲಿದ್ದು, ಮೇ 24ರವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಮೇ 31 ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ 10 ತಂಡಗಳು ಸೆಣಸಲಿದ್ದು, ಟೂರ್ನಿಯಲ್ಲಿ ಒಟ್ಟು 65 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ.
Laxmi News 24×7