ಯಲ್ಲಾಪುರ ಭೀಕರ ರಸ್ತೆ ಅಪಘಾತ: ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಸಿದ್ದಿ ಪ್ರತಿಭೆ ಬಾವತೀಸ್ ದುರ್ಮರಣ

Spread the love

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ-63ರ ಯಲ್ಲಾಪುರ ತಾಲೂಕಿನ ಕೋಳಿಕೆರೆ ಬಳಿ ಮಂಗಳವಾರ (ಮಾ. 24) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಖಾಸಗಿ ವಾಹಿನಿಯ ‘ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್-3’ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ನಿವಾಸಿ ಬಾವತೀಸ್ ರೇಮೆತ್ ಘಾಡಿ ದುರ್ಮರಣವನ್ನಪ್ಪಿದ್ದಾರೆ.

ರಿಯಾಲಿಟಿ ಶೋ ಖ್ಯಾತಿ ಹಾಗೂ ಬೆಂಬಿಡದ ದುರಂತ:
ಮೂಲತಃ ಸಿದ್ದಿ ಜನಾಂಗದ ಪ್ರತಿಭೆಯಾಗಿದ್ದ ಬಾವತೀಸ್, ತಮ್ಮ ಮುಗ್ಧತೆ ಹಾಗೂ ವಿಭಿನ್ನ ಶೈಲಿಯ ಮೂಲಕ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು. ಆದರೆ, ಇವರ ವೈಯಕ್ತಿಕ ಜೀವನದಲ್ಲಿ ವಿಧಿ ಸತತವಾಗಿ ಕ್ರೂರ ಆಟವಾಡಿತ್ತು. ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಇವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆ ನೋವಿನಿಂದ ಹೊರಬರುವ ಮುನ್ನವೇ, ಎರಡು ವರ್ಷಗಳ ಹಿಂದೆ ಇವರ ಮುದ್ದಿನ ಮಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ಹೆಂಡತಿ, ಮಗನ ಕಳೆದುಕೊಂಡು ಒಂಟಿಯಾಗಿದ್ದ ಬಾವತೀಸ್ ಇದೀಗ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವುದು ಇಡೀ ವಾಡಗರಡೊಳ್ಳಿ ಗ್ರಾಮ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ.

ವಿಜಯಪುರದಿಂದ ಮರಳಿ ಕುಮಟಾ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಾವತೀಸ್ ಅವರ ಟಿವಿಎಸ್ ಎಕ್ಸೆಲ್ ನಡುವೆ ಮುಂಜಾನೆ ಸುಮಾರು 1:15ರ ಸುಮಾರಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಕುಮಟಾ ಡಿಪೋಗೆ ಸೇರಿದ ಬಸ್ಸು ಎದುರಿನಿಂದ ದ್ವಿಚಕ್ರ ವಾಹನವು ಬರುತ್ತಿರುವುದನ್ನು ಗಮನಿಸಿದ ಬಸ್ ನಿರ್ವಾಹಕ ಅಬ್ದುಲ್ ನಜೀರ್, ಬಸ್ಸನ್ನು ರಸ್ತೆಯ ಕೆಳಗೆ ಇಳಿಸುವಂತೆ ಚಾಲಕನಿಗೆ ಸೂಚಿಸಿದ್ದರು. ಬಸ್ಸನ್ನು ರಸ್ತೆಯಿಂದ ಕೆಳಗಿಳಿಸಿದರೂ, ಎದುರಿನಿಂದ ಬಂದ ಬಾವತೀಸ್ ಅವರ ವಾಹನ ನಿಯಂತ್ರಣ ತಪ್ಪಿ ಬಸ್ಸಿನ ಬಲಬದಿಯ ಹೆಡ್‌ಲೈಟ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ಸಿನ ಹೆಡ್‌ಲೈಟ್ ಹಾಗೂ ಟಿವಿಎಸ್ ಎಕ್ಸೆಲ್ ವಾಹನಕ್ಕೆ ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಬಸ್ ಸಿಬ್ಬಂದಿ ಬಸ್ಸಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಟಿವಿಎಸ್ ಎಕ್ಸೆಲ್ ವಾಹನವು ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾವತೀಸ್ ಅವರ ಮುಖ ಮತ್ತು ಹಣೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಸ್ ಸಿಬ್ಬಂದಿ ಕೂಡಲೇ ಖಾಸಗಿ ಆಂಬ್ಯುಲೆನ್ಸ್ ತರಿಸಿ ಮೃ, ತದೇಹವನ್ನು ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅವರ ಬಳಿಯಿದ್ದ ಬ್ಯಾಗ್‌ನಲ್ಲಿದ್ದ ಆಧಾರ್ ಕಾರ್ಡ್ ಮೂಲಕ ಗುರುತು ಪತ್ತೆ ಹಚ್ಚಲಾಗಿದೆ.

ಯಲ್ಲಾಪುರ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ-ಧಾರವಾಡ ಪಾಲಿಕೆ ಬಜೆಟ್ ಮಂಡನೆ: ₹16,03,26 ಕೋಟಿ ಘೋಷಣೆ

Spread the loveಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಅನ್ನು ಇಂದು ಮೇಯರ್ ಜ್ಯೋತಿ ಪಾಟೀಲ್ ಮಂಡಿಸಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ