Breaking News

ಗ್ರಾಪಂ ಸದಸ್ಯರ ಆರಂಭದ 15 ತಿಂಗಳು ಅವಿಶ್ವಾಸಕ್ಕಿಲ್ಲ ಅವಕಾಶ: ಹೈಕೋರ್ಟ್

Spread the love

ಬೆಂಗಳೂರು: ಗ್ರಾಪಂ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ 15 ತಿಂಗಳ ನಂತರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಗ್ರಾಪಂ ಸದಸ್ಯರ ಮನವಿ ಮೇರೆಗೆ ಕೊಲಾರ ಉಪವಿಭಾಗದ ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿದ್ದ ಕ್ರಮ ಪ್ರಶ್ನಿಸಿ ಗ್ರಾಪಂ ಅಧ್ಯಕ್ಷ ಸಿ.ಎನ್​. ಶ್ರೀನಿವಾಸ್​ ಎಂಬುವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಅರ್ಜಿದಾರರು ಅಧ್ಯಕ್ಷರ ಅವಧಿಯ ಕೊನೇ ಹಂತದಲ್ಲಿ ಅವಿಶ್ವಾಸ ಮಂಡನೆ ಮಾಡಲು ಸದಸ್ಯರು ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ವಾದ ಸಮರ್ಥನೀಯವಾಗಿಲ್ಲ. ಗ್ರಾಪಂ​ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ 15 ತಿಂಗಳನ್ನು ಆರಂಭಿಕ ಅವಧಿ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಸದಸ್ಯರ ಅಧಿಕಾರ ಸ್ಥಿರವಾಗಿರಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಈ ಅವಧಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗದು. ನಂತರ ಅವಧಿಯಲ್ಲಿ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿರಲಿದೆ ಎಂದು ತಿಳಿಸಿದೆ.

ಅಲ್ಲದೆ, ಅವಧಿಯ ಅಂತ್ಯ ವೇಳೆ ಅವಿಶ್ವಾಸ ನಿರ್ಣಯ ಮಂಡಿಸಲು ಅನುಮತಿ ನೀಡುವುದರಿಂದ ಚುನಾಯಿತ ಪದಾಧಿಕಾರಿಗಳ ಉಳಿದ ಅಧಿಕಾರಾವಧಿ ದುರುಪಯೋಗವಾಗಲಿದೆ ಎನ್ನಲಾಗುವುದಿಲ್ಲ. ಸದಸ್ಯರ ಮನವಿ ಮೇರೆಗೆ ಅವಿಶ್ವಾಸ ನಿರ್ಣಯ ಅಂಗೀಕರಿಸುವ ಸಲುವಾಗಿ ಉಪವಿಭಾಗಾಧಿಕಾರಿಗಳು ಸಭೆ ನಡೆಸಲು ದಿನಾಂಕ ನಿಗದಿ ಮಾಡಿರುವುದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.

ಜೊತೆಗೆ, ಪಂಚಾಯತಿಯಲ್ಲಿನ ಹಣಕಾಸು ಅವ್ಯವಹಾರ ಸಂಬಂಧಿಸಿ ಅರ್ಜಿದಾರರು ಮಾಡಿರುವ ಆರೋಪಗಳಿಗೆ ಪರಿಶೀಲನೆ ನಡೆಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರಕ್ಕೆ ರವಾನಿಸಬೇಕು. ಜತೆಗೆ, ಆದೇಶದ ಪ್ರತಿ ಸಿಕ್ಕ 7 ದಿನಗಳ ಅಕ್ರಮ ಆರೋಪ ಸಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಗ್ರಾಪಂಗೆ ಸೂಚನೆ ನೀಡಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಸಂಬಂಧ ಸದಸ್ಯರು ಮನವಿ ಸಲ್ಲಿಸಿದ್ದರು. ಮನವಿ ಆಧಾರದಲ್ಲಿ 2026ರ ಜ.7ರಂದು ಅವಿಶ್ವಾಸ ನಿರ್ಣಯಕ್ಕೆ ಸಭೆ ನಡೆಸುವುದಕ್ಕಾಗಿ ಕೋಲಾರ ಉಪವಿಭಾಗದ ಉಪ ವಿಭಾಗಾಧಿಕಾರಿಗಳು 2025ರ ಡಿ.20ರಂದು ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಂಚಾಯತಿಯಲ್ಲಿ ಲಭ್ಯವಿರುವ 65 ಲಕ್ಷ ರು. ಬಿಡುಗಡೆಗೆ ಸಂಬಂಧ ಕೆಲ ಸದಸ್ಯರು ಮನವಿ ಮಾಡಿದ್ದರು. ಇದಕ್ಕೆ ಅಧ್ಯಕ್ಷರು ಮಣಿದಿಲ್ಲ. ಇದೇ ಕಾರಣದಿಂದ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್ ನೀಡಲಾಗಿದೆ. 2020ರ ಡಿ.30ರಂದು ಆಯ್ಕೆಯಾಗಿದ್ದು, ಅವರ ಅವಧಿ ಪೂರ್ಣಗೊಳ್ಳುವ ಸಮಯದಲ್ಲಿ ಅವಿಶ್ವಾಸ ನಿರ್ಧಾರಕ್ಕೆ ಮುಂದಾಗಿದ್ದಾರೆ. ಆದ್ದರಿಂದ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ