ಬೆಳಗಾವಿ: ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಶುಕ್ರವಾರ ಜರುಗಿದ ವಿಠ್ಠಲ ಬೀರದೇವರ ಮತ್ತು ಬಾಗುಬಾಯಿ ದೇವಿಯ ನೂತನ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ತಮ್ಮ ಕ್ಷೇತ್ರದ ಶಾಸಕಿಯೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಗ್ರಾಮಸ್ಥರು ಚಿನ್ನದ ಸರ ನೀಡಿ ಸನ್ಮಾನಿಸುವ ಮೂಲಕ ವಿಶೇಷ ಅಭಿಮಾನ ಪ್ರದರ್ಶಿಸಿದ್ದಾರೆ.
ನೂತನ ದೇವಸ್ಥಾನವನ್ನು ಒಂದೂವರೆ ಕೊಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಹಿನ್ನೆಲೆಯಲ್ಲಿ ತೆರೆದ ವಾಹನದಲ್ಲಿ ಸಚಿವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಿಕೊಂಡು, ಚಿನ್ನದ ಸರದ ಸಮೇತ ಸನ್ಮಾನಿಸಿದರು.
ದೇವಸ್ಥಾನ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಶಾಸಕಿಯಾಗಿ ಕ್ಷೇತ್ರದ ಜನರು ಕೊಟ್ಟ ಅವಕಾಶವನ್ನು ಸೂಕ್ತವಾಗಿ ನಿರ್ವಹಿಸುತ್ತಿರುವೆ. ದಾನ ಧರ್ಮ ಮಾಡಿದ ಕೈಯನ್ನು ದೇವರು ಕಾಪಾಡುತ್ತಾನೆ. ಜನಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ನನ್ನ ಕೈ ಕಾಲಲ್ಲಿ ಶಕ್ತಿ ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. 300 ಓಟು ಇದ್ದಲ್ಲಿ 15 ಕೋಟಿ ರೂಪಾಯಿ ಕೆಲಸ ಮಾಡಿಸಿದ್ದೇನೆ. ಬೇರೆಯವರ ಮೇಲೆ ಆರೋಪ ಮಾಡಲು ಸಮಯವಿಲ್ಲ. ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇನೆ. ನನಗೆ ಕೆಲಸ ಒಂದೇ ಗೊತ್ತು. ನಿಮ್ಮ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ನೀವು ಕೊಟ್ಟ ಪ್ರೀತಿಯ ಕಾಣಿಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಧನ್ಯವಾದ ತಿಳಿಸಿದರು.
ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಮಾಳಿಂಗ ಸಾಂಬ್ರೇಕರ, ಹಲಗಾ ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಸಾಂಬ್ರೆಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸುಜಯ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ, ಸಾಗರ ಪೂಜಾರಿ, ಬಾಳಾರಾಮ ಪಾಟೀಲ, ಮನೋಹರ ಮುಚ್ಚಂಡಿ, ಪಿಡಿಒ ಆಶಾ, ಸುರೇಶ ಕರಿಗುಪ್ಪಿಕರ, ರಮೇಶ ಹುಣಶೀಮರದ, ಈರಪ್ಪ ಚೌಗುಲೆ, ಯಲ್ಲಪ್ಪ ಪೂಜೇರಿ, ಮಲ್ಲಪ್ಪ ಸಾಂಬ್ರೇಕರ, ವಿಠ್ಠಲ ಸಾಂಬ್ರೇಕರ, ಮಲ್ಲಪ್ಪ ಪೂಜೇರಿ, ರಮೇಶ ಸಾಂಬ್ರೇಕರ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಇದ್ದರು.
Laxmi News 24×7