ಬೆಂಗಳೂರು: ಕೇರಳ ಸರ್ಕಾರ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆಯನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ? ಆತ್ಮೀಯ ಪಿಣರಾಯಿ ವಿಜಯನ್ ಅವರೇ ಪರಸ್ಪರ ಗೌರವ, ಒಕ್ಕೂಟ ವ್ಯವಸ್ಥೆಯೊಳಗಿನ ಸಹಕಾರ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಭಾವನೆಯಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಮೌಲ್ಯಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಸಂಬಂಧವನ್ನು ದೀರ್ಘಕಾಲದಿಂದ ಮಾರ್ಗದರ್ಶನ ಮಾಡುತ್ತಿದೆ. ಈ ಎರಡು ರಾಜ್ಯಗಳು ಕೇವಲ ಭೌಗೋಳಿಕವಾಗಿ ಮಾತ್ರವಲ್ಲ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನವೀಯ ಬಂಧಗಳಿಂದ ಬೆಸೆದುಕೊಂಡಿವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಪ್ರಸ್ತಾಪಿತ ಮಲಯಾಳಂ ಭಾಷಾ ಮಸೂದೆಯ ಬಗ್ಗೆ ನನಗಿರುವ ಗಂಭೀರ ಕಳವಳವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮಸೂದೆಯು ಕನ್ನಡ ಮಾಧ್ಯಮದ ಶಾಲೆಗಳಲ್ಲೂ, ವಿಶೇಷವಾಗಿ ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿ ಮೊದಲ ಭಾಷೆಯನ್ನಾಗಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವುದನ್ನು ಒಳಗೊಂಡಿದೆ. ಭಾರತದ ನಾಗರಿಕತೆಯ ಶಕ್ತಿಯು ಯಾವಾಗಲೂ ನಿರ್ಭೀತ ಬಹುತ್ವದ ಮೇಲೆ ನಿಂತಿದೆ. ನಮ್ಮ ದೇಶದಲ್ಲಿ ಭಾಷೆಗಳು ಕಡ್ಡಾಯತೆಯ ಬದಲಿಗೆ ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೂಲಕ ವಿಕಸನಗೊಂಡಿವೆ. ಕಾಸರಗೋಡಿನಂತಹ ಗಡಿ ಪ್ರದೇಶಗಳು ಈ ತತ್ವದ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಮತ್ತು ಇತರ ಭಾಷೆಗಳನ್ನಾಡುವ ಜನರು ತಲೆಮಾರುಗಳಿಂದ ಸಾಮರಸ್ಯದಿಂದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ; ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯನ್ನು ಹಾಕುವ ಸಾಧ್ಯತೆಯನ್ನು ಹೊಂದಿದೆ. ಭಾಷಾ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಸಮುದಾಯಗಳಿಗೆ ನಂಬಿಕೆ ಜೊತೆಗೆ ಅವಿರತ ಸೇವೆ ಸಲ್ಲಿಸುತ್ತಿರುವ ದೀರ್ಘಕಾಲೀನ ಶೈಕ್ಷಣಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನಲ್ಲಿ, ವಿಶೇಷವಾಗಿ ಗಡಿ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಜನರು ಕನ್ನಡದಲ್ಲಿ ಶಿಕ್ಷಣವನ್ನು ಅವಲಂಬಿಸಿದ್ದಾರೆ. ಇವರು ಕನ್ನಡ ಭಾಷಾ ಶಿಕ್ಷಣವನ್ನು ಕಲಿಯಲು ಬಯಸುತ್ತಾರೆ ಎಂಬುದು ವಾಸ್ತವಾಂಶ. ಅವರ ಈ ಆದ್ಯತೆಯು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಹನದ ಮೂಲಕ ಸ್ವಾಭಾವಿಕವಾಗಿ ವಿಕಸನಗೊಂಡಿದೆ. ಈ ಸತ್ಯವನ್ನು ಗೌರವಿಸುವುದು ಮಲಯಾಳಂ ಅನ್ನು ದುರ್ಬಲಗೊಳಿಸುವುದಿಲ್ಲ; ಬದಲಿಗೆ ಭಾರತದ ಬಹುತ್ವದ ಬೇರನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
Laxmi News 24×7