Breaking News

ಮೊದಲ ಬಾರಿಗೆ ಅಶ್ವಿನಿ ವೈಷ್ಣವ್ ದಕ್ಷಿಣ ಕನ್ನಡ ಪ್ರವಾಸ – ವಂದೇ ಭಾರತ್ ಲೋಕಾರ್ಪಣೆ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಚಾಲನೆ

Spread the love

ಮಂಗಳೂರು: ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆಗಳ ಸಚಿವರಾದ ಸಚಿವ ಅಶ್ವಿನಿ ವೈಷ್ಣವ್‌ ಅವರು ಹಲವು ಮಹತ್ವದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಇಂದು ರಾತ್ರಿ ಮಂಗಳೂರು  ನಗರಕ್ಕೆ ಆಗಮಿಸಲಿರುವ ಸಚಿವರು ಶುಕ್ರವಾರ ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಲಿರುವ ಮೊತ್ತ ಮೊದಲ ವಂದೇ ಭಾರತ್‌ ಹೈಸ್ಪೀಡ್‌ ರೈಲು ಸೇವೆಗೆ ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪ್ರವಾಸ ಕೈಗೊಂಡು ಇಲ್ಲಿನ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆಗಳನ್ನು ಕೂಡ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ದಕ್ಷಿಣ ಕನ್ನಡ ಭೇಟಿಯು ಭವಿಷ್ಯದಲ್ಲಿ ಜಿಲ್ಲೆಯ ರೈಲು ಸಂಪರ್ಕ ಜಾಲದ ಬಲವರ್ಧನೆ ಹಾಗೂ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಹೊಸ ಬಾಷ್ಯ ಬರೆಯುವ ನಿರೀಕ್ಷೆಗಳು ಗರಿಗೆದರಿವೆ.

ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮೂರು ಮಹತ್ವದ ರೈಲ್ವೆ ಯೋಜನೆಗಳು ಲೋಕಾರ್ಪಣೆಗೊಳ್ಳಲಿವೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಈ ರೈಲು ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಮಹತ್ವದ ಮೈಲುಗಲ್ಲಾಗಿದ್ದು, ಪ್ರವಾಸೋದ್ಯಮ, ವಾಣಿಜ್ಯ ಮತ್ತು ದೈನಂದಿನ ಪ್ರಯಾಣಿಕರಿಗೆ ಹೊಸ ವೇಗ ನೀಡಲಿವೆ.

ಲೋಕಾರ್ಪಣೆಗೊಳ್ಳಲಿರುವ ಪ್ರಮುಖ ಯೋಜನೆಗಳು:
ಬೆಂಗಳೂರು – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಕಡಿತಗೊಳಿಸಿ, ಆಧುನಿಕ ಹಾಗೂ ವೇಗದ ಪ್ರಯಾಣದ ಅನುಭವ ನೀಡುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ. ಈ ಹೈಸ್ಪೀಡ್‌ ರೈಲು ಸೇವೆಯಿಂದ ವಾಣಿಜ್ಯ ನಗರಿಯಾಗಿರುವ ಮಂಗಳೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಜನರ ಪ್ರಯಾಣದ ಅವಧಿಯಲ್ಲಿ ಹೆಚ್ಚಿನ ಇಳಿಕೆಯಾಗಲಿದ್ದು, ಇದು ಇಲ್ಲಿನ ಔದ್ಯೋಗಿಕ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಸಕಲೇಶಪುರ – ಸುಬ್ರಹ್ಮಣ್ಯ ರಸ್ತೆ ವಿದ್ಯುದ್ದೀಕರಣ
ಘಾಟ್ ಸೆಕ್ಷನ್‌ನ ಅತ್ಯಂತ ಸವಾಲಿನ ಮಾರ್ಗವಾದ ಸುಬ್ರಹ್ಮಣ್ಯ ರಸ್ತೆ ಮತ್ತು ಸಕಲೇಶಪುರ ನಡುವಿನ ರೈಲ್ವೆ ಹಳಿ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೊಳ್ಳಲಿದೆ. ಇದರಿಂದ ಪಶ್ಚಿಮ ಘಟ್ಟದ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ರೈಲುಗಳ ಸಂಚಾರ ವೇಗ ಮತ್ತು ಸಾಮರ್ಥ್ಯ ಹೆಚ್ಚಾಗಲಿದೆ.

ಸುಬ್ರಹ್ಮಣ್ಯ ರಸ್ತೆ ‘ಅಮೃತ್ ಭಾರತ್’ ರೈಲ್ವೆ ನಿಲ್ದಾಣ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ್ ಭಾರತ್ ನಿಲ್ದಾಣ’ ಯೋಜನೆಯಡಿ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಣಗೊಂಡಿರುವ ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು.


Spread the love

About Laxminews 24x7

Check Also

ಅಡುಗೆ ಎಣ್ಣೆ ಮರುಬಳಕೆಗೆ ಸರ್ಕಾರ ನಿರ್ಬಂಧ – ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ

Spread the loveಬೆಂಗಳೂರು: ಅಡುಗೆ ಎಣ್ಣೆ  ಮರುಬಳಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ  ದಿಟ್ಟ ಹೆಜ್ಜೆ ಇಟ್ಟಿದೆ. ಹೋಟೆಲ್‌ಗಳಲ್ಲಿ ಇನ್ಮುಂದೆ ಅಡುಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ